ADVERTISEMENT

ನೀರವ್‌ ಮೋದಿ ದುಬಾರಿ ಸರಕು ಹರಾಜು ತಡೆಗೆ ಕೋರ್ಟ್ ನಕಾರ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 19:45 IST
Last Updated 4 ಮಾರ್ಚ್ 2020, 19:45 IST
   

ಮುಂಬೈ:ಜಾರಿ ನಿರ್ದೇಶನಾಲಯ (ಇ.ಡಿ) ವಶಪಡಿಸಿಕೊಂಡಿರುವ ವಜ್ರದ ವ್ಯಾಪಾರಿ ನೀರವ್‌ ಮೋದಿಗೆ ಸೇರಿದ ಅಪರೂಪದ ಕಲಾಕೃತಿಗಳ ಹರಾಜು ಪ್ರಕ್ರಿಯೆಗೆ ತಡೆ ನೀಡಲು ಮುಂಬೈ ಹೈಕೋರ್ಟ್‌ ಬುಧವಾರ ನಿರಾಕರಿಸಿದೆ.

ಹರಾಜು ಪ್ರಕ್ರಿಯೆ ಮಾರ್ಚ್‌ 6ಕ್ಕೆ (ಶುಕ್ರವಾರ) ನಿಗದಿಯಾಗಿದೆ. ಈ ಪ್ರಕ್ರಿಯೆಗೆತಡೆ ಕೋರಿ ನೀರವ್‌ ಪುತ್ರ ರೋಹಿನ್‌ ಮೋದಿ ಅರ್ಜಿ ಸಲ್ಲಿಸಿದ್ದರು. ಈ ಕಲಾಕೃತಿಗಳು ರೋಹಿನ್‌ ಟ್ರಸ್ಟ್‌ಗೆ ಸೇರಿದ್ದಾಗಿದ್ದು, ಇದು ನೀರವ್‌ ಮೋದಿ ಒಡೆತನದ್ದಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

ಮುಖ್ಯ ನ್ಯಾಯಮೂರ್ತಿ ಎಸ್‌.ಸಿ.ಧರ್ಮಾಧಿಕಾರಿ ಮತ್ತು ಎನ್.ಆರ್‌. ಬೋರ್ಕರ್‌ ಅವರಿದ್ದ ಪೀಠ ಪ್ರಕರಣದ ವಿಚಾರಣೆ ನಡೆಸಿತು.

ADVERTISEMENT

ರೋಹಿನ್‌ ಮೋದಿ, ನೀರವ್‌ ಮೋದಿ ಮತ್ತು ಅವರ ಪತ್ನಿ ಈ ಟ್ರಸ್ಟ್‌ನ ಫಲಾನುಭವಿಗಳಾಗಿದ್ದಾರೆ ಎಂದುಇ.ಡಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ವಾದ, ಪ್ರತಿವಾದ ಆಲಿಸಿದ ನ್ಯಾಯಾಲಯ, ‘ಪ್ರಕರಣಕ್ಕೆ ಸಂಬಂಧಿಸಿದಂತೆ ರೋಹಿನ್‌ ಟ್ರಸ್ಟ್‌ ಅಥವಾ ಅದರ ಇತರ ಫಲಾನುಭವಿಗಳಾದ ನೀರವ್ ಮೋದಿ ಮತ್ತು ಅವರ ಪತ್ನಿ ನ್ಯಾಯಾಲಯದ ಮೆಟ್ಟಿಲು ಹತ್ತಿಲ್ಲ. ಅಲ್ಲದೆ, ರೋಹಿನ್‌ ಮೋದಿ ಅವರು ಕೊನೆಯ ಕ್ಷಣದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ವಿಳಂಬ ಧೋರಣೆಯನ್ನು ಸಮರ್ಥಿಸುವ ಪ್ರಯತ್ನವೂ ನಡೆದಿಲ್ಲ. ಇಂತಹ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ಆದೇಶವನ್ನು ನೀಡಲು ಸಾಧ್ಯವಿಲ್ಲ’ ಎಂದು ತಿಳಿಸಿತು.

‘ಹರಾಜು ಪ್ರಕ್ರಿಯೆಯಲ್ಲಿ ಬಂದ ಹಣವನ್ನು ಪ್ರತ್ಯೇಕ ಬ್ಯಾಂಕ್‌ ಖಾತೆಯಲ್ಲಿ ಠೇವಣಿ ಹೂಡಬೇಕು. ಮುಂದಿನ ಆದೇಶದವರೆಗೂ ಈ ಹಣವನ್ನು ಯಾವುದಕ್ಕೂ ಬಳಸುವಂತಿಲ್ಲ’ ಎಂದು ಜಾರಿ ನಿರ್ದೇಶನಾಲಯಕ್ಕೆ ಕೋರ್ಟ್‌ ಸೂಚಿಸಿದೆ.

ಹದಿನೈದು ಕಲಾಕೃತಿಗಳ ಜೊತೆಗೆದುಬಾರಿ ಕೈಗಡಿಯಾರ, ಕೈಚೀಲಗಳು, ಐಷಾರಾಮಿ ಕಾರುಗಳನ್ನು ಹರಾಜಿಗೆ ಇಡಲಾಗಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ₹13,600 ಕೋಟಿ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ನೀರವ್ ಮೋದಿಯನ್ನು ಲಂಡನ್‌ನಲ್ಲಿ ಬಂಧಿಸಿ, ಜೈಲಿನಲ್ಲಿ ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.