ADVERTISEMENT

ಗಡಿ ವಿವಾದ: ಕರ್ನಾಟಕಕ್ಕೆ ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಳಿಸಿದ ಮಹಾರಾಷ್ಟ್ರ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 15:49 IST
Last Updated 6 ಡಿಸೆಂಬರ್ 2022, 15:49 IST
   

ಮುಂಬೈ: ಗಡಿ ವಿವಾದದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಬೆನ್ನಲ್ಲೇ ಪೊಲೀಸರ ಸಲಹೆ ಮೇರೆಗೆ ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆಯು(ಎಂಎಸ್‌ಆರ್‌ಟಿಸಿ) ಕರ್ನಾಟಕಕ್ಕೆ ಬಸ್ ಸೇವೆಯನ್ನು ಸ್ಥಗಿತಗೊಳಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಿಟಿಐ ಜೊತೆ ಮಾತನಾಡಿದ ಎಂಎಸ್‌ಆರ್‌ಟಿಸಿ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶೇಖರ್ ಚನ್ನೆ, ಕರ್ನಾಟಕಕ್ಕೆ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆ ಮತ್ತು ಅವರಿಗೆ ಆಗಬಹುದಾದ ನಷ್ಟ ತಡೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪೊಲೀಸರ ಸಲಹೆ ಮೇರೆಗೆ ಮಂಗಳವಾರ ಮಧ್ಯಾಹ್ನದಿಂದ ಬಸ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಆದರೆ, ಬಸ್ ಸೌಲಭ್ಯ ಎಲ್ಲಿಯವರೆಗೆ ಸ್ಥಗಿತಗೊಳ್ಳಲಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಕರವೇ ಪ್ರತಿಭಟನೆ

ಗಡಿ ವಿಚಾರವಾಗಿ ಮಹಾರಾಷ್ಟ್ರದ ನಿಲುವು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಿರೇಬಾಗೆವಾಡಿಯಲ್ಲಿ ಪ್ರತಿಭಟನೆ ನಡೆಸಿತು. ಕರವೇ ಅಧ್ಯಕ್ಷ ನಾರಾಯಣ ಗೌಡ ಸೇರಿದಂತೆ ಹಲವು ಕಾರ್ಯಕರ್ತರನ್ನು ಪೊಲೀಸರು ಇಲ್ಲಿನ ಟೋಲ್‌ಗೇಟ್‌ ಬಳಿಯೇ ವಶಕ್ಕೆ ಪಡೆದರು.

ಕಾರ್‌, ಜೀಪ್‌ ಸೇರಿದಂತೆ 110 ವಾಹನಗಳಲ್ಲಿ ಬೆಳಗಾವಿಯತ್ತ ಬಂದ 400ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಹಿರೇಬಾಗೇವಾಡಿಯ ರಾಷ್ಟ್ರೀಯ ಹೆದ್ದಾರಿ ಮೇಲೆ ತಡೆದರು. ದೂರದಲ್ಲೇ ವಾಹನ ನಿಲ್ಲಿಸಿ ಪ್ರತಿಭಟನಾ ರ್‍ಯಾಲಿ ಆರಂಭಿಸಿದ ಕಾರ್ಯಕರ್ತರು, ಟೋಲ್‌ಗೇಟ್‌ ದಾಟಿ ಬೆಳಗಾವಿಯತ್ತ ನುಗ್ಗಲು ಯತ್ನಿಸಿದರು.

ಬ್ಯಾರಿಕೇಡ್‌ಗಳನ್ನು ಇಟ್ಟು, ಲಾಠಿ ಹಿಡಿದು ಸಜ್ಜುಗೊಂಡಿದ್ದ ಪೊಲೀಸರು ಎಲ್ಲರನ್ನೂ ತಡೆದರು. ತೀವ್ರ ಆಕ್ರೋಶಗೊಂಡ ಕಾರ್ಯಕರ್ತರು ಪೊಲೀಸರ ವಿರುದ್ಧ ಘೋಷಣೆ ಮೊಳಗಿಸಿದರು.‌

ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವ ಸಲುವಾಗಿ ಪೊಲೀಸರು ಎಂಟು ಸರ್ಕಾರಿ ಬಸ್‌ಗಳನ್ನು ಸ್ಥಳದಲ್ಲಿ ನಿಲ್ಲಿಸಿದ್ದರು. ಮುಖಂಡರು ಬ್ಯಾರಿಕೇಡ್‌ ತಳ್ಳಿ ಮುನ್ನುಗ್ಗಲು ಯತ್ನಿಸಿದಾಗ ಎಲ್ಲರನ್ನೂ ವಶಕ್ಕೆ ಪಡೆದು ಬಸ್‌ಗಳಲ್ಲಿ ಹತ್ತಿಸಿದರು.

ತಮ್ಮ ನಾಯಕರ ಬಂಧನ ಖಂಡಿಸಿ ಮತ್ತೆ ಕೆಲ ಕಾರ್ಯಕರ್ತರು ಬಸ್ಸಿನ ಚಕ್ರದಡಿ ಮಲಗಿ ಪ್ರತಿಭಟನೆ ನಡೆಸಿದರು. ಅವರನ್ನು ಹೊರಗೆಳೆದ ನಂತರ ಬಸ್‌ಗಳನ್ನು ಸ್ಥಳದಿಂದ ಬಿಡಲಾಯಿತು. ಇನ್ನೂರು ಮಂದಿಯನ್ನು ವಶಕ್ಕೆ ಪಡೆದ ನಂತರ, ಉಳಿದ ಇನ್ನೂರು ಮಂದಿ ಬ್ಯಾರಿಕೇಡ್‌ಗಳ ಆಚೆಗೇ ನಿಂತು ಕೂಗಾಡಿದರು.

ಇದೇ ವೇಳೆ ಹೆದ್ದಾರಿಯಲ್ಲಿ ಬಂದ ಮಹಾರಾಷ್ಟ್ರದ ನೋಂದಣಿ ಇರುವ ಲಾರಿಯೊಂದನ್ನು ತಡೆದ ಪ್ರತಿಭಟನಾಕಾರರು, ಅದರ ಮೇಲೆ ಹತ್ತಿ ಕನ್ನಡ ಧ್ವಜ ಹಾರಿಸಿದರು. ಈ ಮಾರ್ಗದಲ್ಲಿ ಬಂದ ಎಲ್ಲ ವಾಹನಗಳನ್ನು ತಡೆದು ಮಹಾರಾಷ್ಟ್ರಕ್ಕೆ ಧಿಕ್ಕಾರ ಕೂಗಿದರು.

ಲಾರಿಯೊಂದಕ್ಕೆ ಕಲ್ಲೆಸೆದ ಪ್ರತಿಭಟನಾಕಾರರು, ಗಾಜು ಪುಡಿಪುಡಿ ಮಾಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಲಾಠಿ ಬೀಸಿ ಎಲ್ಲರನ್ನೂ ಚದುರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.