ADVERTISEMENT

ದೇಶದಲ್ಲಿ ರೈತ ಸರ್ಕಾರ ಸ್ಥಾಪನೆ: ಕೆಸಿಆರ್‌ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 19:30 IST
Last Updated 5 ಫೆಬ್ರುವರಿ 2023, 19:30 IST
ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದ ಭಾರತ್‌ ರಾಷ್ಟ್ರ ಸಮಿತಿಯ (ಬಿಆರ್‌ಎಸ್) ಸಾರ್ವಜನಿಕ ಸಭೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ, ಬಿಆರ್‌ಎಸ್ ಮುಖಂಡ ಕೆ.ಚಂದ್ರಶೇಖರ ರಾವ್ ಪಾಲ್ಗೊಂಡಿದ್ದರು –ಪಿಟಿಐ ಚಿತ್ರ
ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದ ಭಾರತ್‌ ರಾಷ್ಟ್ರ ಸಮಿತಿಯ (ಬಿಆರ್‌ಎಸ್) ಸಾರ್ವಜನಿಕ ಸಭೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ, ಬಿಆರ್‌ಎಸ್ ಮುಖಂಡ ಕೆ.ಚಂದ್ರಶೇಖರ ರಾವ್ ಪಾಲ್ಗೊಂಡಿದ್ದರು –ಪಿಟಿಐ ಚಿತ್ರ   

ಮುಂಬೈ: ‘ದೇಶದಲ್ಲಿನ ಪ್ರಸ್ತುತ ರೈತರ ದುಸ್ಥಿತಿಗೆ ಕಾಂಗ್ರೆಸ್, ಬಿಜೆಪಿಯೇ ಹೊಣೆ’ ಎಂದು ವಾಗ್ದಾಳಿ ನಡೆಸಿರುವ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಮುಖಂಡ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಅವರು ‘ಅಬ್‌ ಕೀ ಬಾರ್‌, ಕಿಸಾನ್‌ ಸರ್ಕಾರ್’ ಘೋಷಣೆಯನ್ನು ಮೊಳಗಿಸಿದ್ದಾರೆ.

ರೈತರಿಗೂ ಈ ಘೋಷಣೆ ಕೂಗುವಂತೆ ಪ್ರೋತ್ಸಾಹಿಸಿದ ಅವರು, ‘ದೇಶದ ಸ್ಥಿತಿಗತಿಯನ್ನು ಬದಲಿಸಲು ರೈತರು ಶಾಸಕರು, ಸಂಸದರು ಆಗಬೇಕು’ ಎಂದು ಕರೆ ನೀಡಿದ್ದಾರೆ. ತೆಲಂಗಾಣದ ಹೊರಗಡೆ ಇದೇ ಮೊದಲ ಬಾರಿಗೆ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಆಯೋಜಿಸಿದ್ದ ಬೃಹತ್ ರ‍್ಯಾಲಿಯನ್ನು ಉದ್ಘಾಟಿಸಿ ಮಾತನಾಡಿದರು.

ತೆಲಂಗಾಣ ರಾಷ್ಟ್ರ ಸಮಿತಿಯನ್ನು (ಟಿಆರ್‌ಎಸ್‌), ಬಿಆರ್‌ಎಸ್‌ ಎಂದು ಕಳೆದ ಡಿಸೆಂಬರ್‌ನಲ್ಲಿ ಮರುನಾಮಕರಣ ಮಾಡಿದ್ದು, ಪಕ್ಷ ಬಲಪಡಿಸಲು ಕೆಸಿಆರ್‌ ಅವರು ದೇಶವ್ಯಾಪಿ ಪ್ರವಾಸ ಕೈಗೊಂಡಿದ್ದಾರೆ.

ADVERTISEMENT

‘ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದೆ. ಈ ಪೈಕಿ ಕಾಂಗ್ರೆಸ್‌ 54 ವರ್ಷ, ಬಿಜೆಪಿ 16 ವರ್ಷ ಆಡಳಿತ ನಡೆಸಿದೆ. ಉಳಿದ ಅವಧಿಯಲ್ಲಿ ಕೆಲವರು ಬಂದು, ಹೋಗಿದ್ದಾರೆ. ಆದರೆ, ದೇಶದಲ್ಲಿನ ರೈತರ ಈಗಿನ ದುಸ್ಥಿತಿಗೆ ಯಾರು ಹೊಣೆ. ಈ ಎರಡು ಪಕ್ಷಗಳೇ’ ಎಂದು ಅವರು ಆರೋಪಿಸಿದರು.

‘ರೈತರು ಒಗ್ಗೂಡುವುದಿಲ್ಲ ಎಂಬುದನ್ನು ಈ ಪಕ್ಷಗಳು ಅರ್ಥ ಮಾಡಿಕೊಂಡಿವೆ. ಇದರ ಲಾಭವನ್ನು ಪಡೆಯುತ್ತಿವೆ. ಚುನಾವಣೆಯ ಸಂದರ್ಭದಲ್ಲಿ ನಿಮ್ಮ ಬಲವನ್ನು ತೋರಿಸಿ. ಅಧಿಕಾರಕ್ಕೆ ಬನ್ನಿ. ಶಾಸಕರು, ಸಂಸದರು ಆಗಿ. ಜಿಲ್ಲಾ ಪರಿಷತ್‌ನಿಂದಲೇ ಆರಂಭಿಸಿ. ಪಕ್ಷದ ಬಾವುಟವನ್ನು ಹಿಡಿದು ರೈತರ ಸರ್ಕಾರ ಸ್ಥಾಪಿಸಿ’ ಎಂದು ಕರೆ ನೀಡಿದರು.

ರೈತರು ಮಾತ್ರವೇ ದೇಶದ ಹಣೆಬರಹವನ್ನು ಬದಲಿಸುವುದು, ಅಭಿವೃದ್ಧಿಪಡಿಸುವುದು ಸಾಧ್ಯ. ತೆಲಂಗಾಣದಲ್ಲಿ ಜಾರಿಗೊಳಿಸಿರುವ ದಿನದ 24 ಗಂಟೆ ವಿದ್ಯುತ್‌ ಪೂರೈಕೆ ಮತ್ತು ರೈತ ವಿಮೆ ಯೋಜನೆಯನ್ನು ಅಧಿಕಾರಕ್ಕೆ ಬಂದಲ್ಲಿ ದೇಶದಾದ್ಯಂತ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.