ಕೇರಳದ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ನಿಫಾ ವೈರಸ್‌ಗೆ ತುತ್ತಾಗಿದ್ದಾನೆ ಎನ್ನಲಾದ ವ್ಯಕ್ತಿಯನ್ನು ವೈದ್ಯಕೀಯ ಸಿಬ್ಬಂದಿ ಐಸಿಯುಗೆ ಸ್ಥಳಾಂತರಿಸಿದರು
–ಪಿಟಿಐ ಚಿತ್ರ
ಕೋಯಿಕ್ಕೋಡ್: ಕೇರಳದ ಮಲಪ್ಪುರದಲ್ಲಿ ನಿಫಾ ವೈರಸ್ ಸೋಂಕಿಗೆ ಒಳಗಾಗಿದ್ದ 14 ವರ್ಷದ ಬಾಲಕ ಭಾನುವಾರ ಮೃತಪಟ್ಟಿದ್ದಾನೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸಚಿವೆ ವೀಣಾ, ‘ಪಾಂಡಿಕ್ಕಾಡ್‌ನ ಬಾಲಕನಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಾಲಕ ಹೃದಯ ಸ್ತಂಭನದಿಂದ ಭಾನುವಾರ ಮೃತಪಟ್ಟಿದ್ದಾನೆ. ಆತನನ್ನು ಉಳಿಸಿಕೊಳ್ಳಲು ಯತ್ನಿಸಲಾಯಿತು. ಆದರೆ, ಅದು ಸಾಧ್ಯವಾಗಲಿಲ್ಲ. ಅಂತರರಾಷ್ಟ್ರೀಯ ಮಾರ್ಗದರ್ಶಿ ಸೂತ್ರಗಳ ಅನ್ವಯ ಬಾಲಕನ ಅಂತ್ಯಸಂಸ್ಕಾರ ನೆರವೇರಿಸಲಾಗುವುದು’ ಎಂದು ತಿಳಿಸಿದರು.
‘ಬಾಲಕನ ಜೊತೆಗೆ ಒಟ್ಟಾರೆ 246 ಮಂದಿ ಸಂಪರ್ಕಕ್ಕೆ ಬಂದಿದ್ದು, ಇವರಲ್ಲಿ 63 ಮಂದಿಯನ್ನು ಸೋಂಕು ತಗಲುವ ಅಪಾಯ ಹೆಚ್ಚು ಇರುವವರು ಎಂದು ಗುರುತಿಸಲಾಗಿದೆ. ಇವರೆಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗುವುದು. ಆದರೆ, ನಿಫಾ ವೈರಸ್ ರೀತಿಯ ಸೋಂಕು ಕಂಡುಬಂದವರನ್ನು ಮಾತ್ರವೇ ಮೊದಲಿಗೆ ಪರೀಕ್ಷಿಸಲಾಗುವುದು’ ಎಂದು ಮಾಹಿತಿ ನೀಡಿದರು.
ನಿಫಾ ಸೋಂಕಿನ ಕೇಂದ್ರಸ್ಥಾನ ಎಂದು ಗುರುತಿಸಲಾಗಿರುವ ಪಾಂಡಿಕ್ಕಾಡ್ ಸೇರಿದಂತೆ ಎರಡು ಪಂಚಾಯಿತಿ ವ್ಯಾಪ್ತಿಗಳಲ್ಲಿ ‘ಜ್ವರ ಕಣ್ಗಾವಲು’ ಸಮೀಕ್ಷೆ ನಡೆಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಈ ಮೂಲಕ 33 ಸಾವಿರ ಮನೆಗಳಲ್ಲಿ ಈ ಪರೀಕ್ಷೆ ನಡೆಸಲಾಗುತ್ತದೆ. ಪಾಂಡಿಕ್ಕಾಡ್ ಸ್ಥಳದಿಂದ ಮೂರು ಕಿ.ಮೀ ವ್ಯಾಪ್ತಿಯಲ್ಲಿ ನಿರ್ಬಂಧ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2018, 2021 ಮತ್ತು 2023ರಲ್ಲಿ ಕೋಯಿಕ್ಕೋಡ್, 2019ರಲ್ಲಿ ಎರ್ನಾಕುಲಂ ಜಿಲ್ಲೆಯಲ್ಲಿ ನಿಫಾ ವೈರಸ್ ಕಂಡುಬಂದಿತ್ತು. ಅಲ್ಲದೆ, ಕೋಯಿಕ್ಕೋಡ್, ವಯನಾಡ್, ಇಡುಕ್ಕಿ, ಮಲಪ್ಪುರ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಬಾವಲಿಗಳಲ್ಲಿ ನಿಫಾ ವೈರಸ್‌ನ ರೋಗ ನಿರೋಧಕ ಶಕ್ತಿ ಕಂಡುಬಂದಿತ್ತು ಎನ್ನಲಾಗಿದೆ.
ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ ಐಸಿಯು ಬೆಡ್
ನಿಫಾ ವೈರಸ್‌ಗೆ ತುತ್ತಾಗಿ ಮೃತಪಟ್ಟಿರುವ ಬಾಲಕನ ಸಂಪರ್ಕಕ್ಕೆ ಬಂದವರನ್ನು ಪ್ರತ್ಯೇಕವಾಗಿರಿಸಲು ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ 30 ಪ್ರತ್ಯೇಕ ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ. ಜೊತೆಗೆ ಅವರಿಗೆ ಅಗತ್ಯ ಚಿಕಿತ್ಸೆ ಕಲ್ಪಿಸಲು 6 ಐಸಿಯು ಬೆಡ್‌ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಸಚಿವೆ ವೀಣಾ ಜಾರ್ಜ್ ತಿಳಿಸಿದರು.
ನಿಫಾ: ಕೇರಳದ ನೆರವಿಗೆ ಕೇಂದ್ರದ ತಂಡ
ನವದೆಹಲಿ: ಮಲಪ್ಪುರ ಜಿಲ್ಲೆಯಲ್ಲಿ ಪತ್ತೆಯಾಗಿರುವ ನಿಫಾ ವೈರಸ್ ಕುರಿತ ಪರಿಶೀಲನೆಗಾಗಿ ಕೇರಳಕ್ಕೆ ಬಹು ಸದಸ್ಯರು ಇರುವ ಜಂಟಿ ತಂಡವನ್ನು ನಿಯೋಜಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ತಂಡವು ಕೇರಳ ಸರ್ಕಾರಕ್ಕೆ ರೋಗ ಪತ್ತೆಗೆ ತಾಂತ್ರಿಕ ಸಹಕಾರ ನೀಡಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಆರೋಗ್ಯ ಇಲಾಖೆಯು ‘ಬಾಲಕ ನಿಫಾ ವೈರಸ್ ಸೋಂಕಿಗೆ ಒಳಗಾಗಿದ್ದ ಎಂದು ಪುಣೆಯಲ್ಲಿರುವ ‘ರಾಷ್ಟ್ರೀಯ ವೈರಾಣು ಸಂಸ್ಥೆ’ಯು ದೃಢಪಡಿಸಿದೆ’ ಎಂದು ತಿಳಿಸಿದೆ. ಹೀಗಾಗಿ ಬಾಲಕನ ಕುಟುಂಬಸ್ಥರು ಸುತ್ತಮುತ್ತಲಿನ ಜನರನ್ನು ಪರೀಕ್ಷೆಗೊಳಪಡಿಸಬೇಕು. ಕಳೆದ 12 ದಿನಗಳಿಂದ ಆ ಬಾಲಕನ ಸಂಪರ್ಕಕ್ಕೆ ಬಂದಿರುವ ಪ್ರತಿಯೊಬ್ಬರನ್ನು ಗುರುತಿಸಬೇಕು. ಅವರನ್ನು ಕಡ್ಡಾಯವಾಗಿ ಪ್ರತ್ಯೇಕವಾಗಿ ಇರಿಸುವುದು ಸೇರಿದಂತೆ ಸಾರ್ವಜನಿಕರ ಆರೋಗ್ಯದ ಸುರಕ್ಷತೆಗೆ ಅಗತ್ಯವಿರುವ ಇನ್ನಿತರ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.