ADVERTISEMENT

ಮಹಾ ಪರಿನಿರ್ವಾಣ ದಿನ: ಮುರ್ಮು, ಖರ್ಗೆ ಸೇರಿ ಗಣ್ಯರಿಂದ ಅಂಬೇಡ್ಕರ್ ಸ್ಮರಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಡಿಸೆಂಬರ್ 2023, 7:47 IST
Last Updated 6 ಡಿಸೆಂಬರ್ 2023, 7:47 IST
<div class="paragraphs"><p>ಮಹಾ ಪರಿನಿರ್ವಾಣ ದಿನ</p></div>

ಮಹಾ ಪರಿನಿರ್ವಾಣ ದಿನ

   

ನವದೆಹಲಿ: 67ನೇ ಮಹಾ ಪರಿನಿರ್ವಾಣ ದಿನದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಹಲವು ಗಣ್ಯರು ಅಂಬೇಡ್ಕರ್‌ ಅವರ ಅಪಾರ ಸೇವೆಯನ್ನು ಸ್ಮರಿಸಿದ್ದಾರೆ.

ಸಂಸತ್‌ ಭವನದ ಮುಂದಿರುವ ಅಂಬೇಡ್ಕರ್‌ ಪ್ರತಿಮೆಗೆ ರಾಷ್ಟ್ರಪತಿ ದ್ರೌಪತಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಅವರು ಪುಷ್ಪ ನಮನ ಸಲ್ಲಿಸಿದ್ದಾರೆ.

ADVERTISEMENT

ಅಂಬೇಡ್ಕರ್‌ ಹೇಳಿಕೆಯೊಂದನ್ನು ಉಲ್ಲೇಖಸಿರುವ ಮಲ್ಲಿಕಾರ್ಜುನ ಖರ್ಗೆ, ‘ಬಾಬಾಸಹೇಬ್ ಅವರು ಪ್ರಜಾಸತ್ತಾತ್ಮಕ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಜೀವನವಿಡೀ ಹೋರಾಟ ನಡೆಸಿದ್ದರು’ ಎಂದು ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

‘ಸೌಹಾರ್ದತೆ ಮತ್ತು ರಾಷ್ಟ್ರೀಯ ಏಕತೆಯ ಮನೋಭಾವವನ್ನು ಮನದಲ್ಲಿಟ್ಟುಕೊಂಡು ಅಂಬೇಡ್ಕರ್‌ ಸಂವಿಧಾನವನ್ನು ರಚಿಸಿದ್ದರು. ದೇಶಕ್ಕೆ ಪ್ರಗತಿಪರ ಮತ್ತು ನ್ಯಾಯ-ಕೇಂದ್ರಿತ ಸಂವಿಧಾನವನ್ನು ನೀಡಿದ್ದು, ಇದು ಬಡವರಿಗೆ ನ್ಯಾಯ ಮತ್ತು ಹಕ್ಕುಗಳನ್ನು ಖಾತ್ರಿಪಡಿಸಿದೆ’ ಎಂದು ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

‘ಜಾತಿ, ಧರ್ಮ, ಲಿಂಗಾಧಾರಿತ ಶೋಷಣೆಯಿರದ ಸಮತೆಯ ಸಮಾಜ ನಿರ್ಮಾಣ ಡಾ. ಬಿ.ಆರ್ ಅಂಬೇಡ್ಕರ್ ಅವರ ಕನಸಾಗಿತ್ತು. ಅವರು ತಮ್ಮ ಜ್ಞಾನ, ಅನುಭವ ಮತ್ತು ಆದರ್ಶಗಳನ್ನು ಸಂವಿಧಾನದ ರೂಪದಲ್ಲಿ ಧಾರೆಯೆರೆದಿದ್ದಾರೆ. ಸಂವಿಧಾನದ ಆಶಯಗಳಡಿ ಹೆಜ್ಜೆಹಾಕುವ ಮೂಲಕ ಬಾಬಾ ಸಾಹೇಬರ ಕನಸು ನನಸಾಗಿಸುವ ಪ್ರತಿಜ್ಞೆ ಮಾಡೋಣ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

‘ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ ಮತ್ತು ಸಂದೇಶವು ಎಲ್ಲ ನಾಗರಿಕರಿಗೂ ನ್ಯಾಯ ದೊರಕಿಸಲು ಹೋರಾಟಕ್ಕೆ ನಿತ್ಯ ನನಗೆ ಸ್ಫೂರ್ತಿ ನೀಡುತ್ತವೆ’ ಎಂದು ರಾಹುಲ್ ಗಾಂಧಿ ಸ್ಮರಿಸಿದ್ದಾರೆ.

ಶೋಷಿತ ಮತ್ತು ವಂಚಿತ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿ, ಭಾರತ ಸಂವಿಧಾನವನ್ನು ರಚಿಸಿರುವ ಅಂಬೇಡ್ಕರ್ 06 ಡಿಸೆಂಬರ್ 1956ರಂದು ನಿಧನರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.