ADVERTISEMENT

ಯೋಗಿ ಕೋಟೆಯ ಬ್ರಾಹ್ಮಣ ನಾಯಕ ಎಸ್‌ಪಿಯತ್ತ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 19:45 IST
Last Updated 10 ಡಿಸೆಂಬರ್ 2021, 19:45 IST
ಯೋಗಿ ಆಗಿತ್ಯನಾಥ್
ಯೋಗಿ ಆಗಿತ್ಯನಾಥ್   

ಲಖನೌ: ಉತ್ತರ ‍ಪ್ರದೇಶದ ಬ್ರಾಹ್ಮಣ ಸಮುದಾಯದ ಪ್ರಭಾವಿ ನಾಯಕ ಪಂಡಿತ್‌ ಹರಿ ಶಂಕರ್‌ ತಿವಾರಿ ಅವರು ಸಮಾಜವಾದಿ ಪಕ್ಷಕ್ಕೆ (ಎಸ್‌ಪಿ) ಭಾನುವಾರ ಸೇರ್ಪಡೆ ಆಗಲಿದ್ದಾರೆ. ಪೂರ್ವಾಂಚಲ ಪ್ರದೇಶದಲ್ಲಿ ಅವರು ಅತಿ ಹೆಚ್ಚು ಪ್ರಭಾವ ಹೊಂದಿದ್ದಾರೆ. ಅವರ ಇಬ್ಬರು ಮಕ್ಕಳೂ ಎಸ್‌ಪಿ ಸೇರಲಿದ್ದಾರೆ. ಅವರಲ್ಲಿ ಒಬ್ಬರು ಬಿಎಸ್‌ಪಿ ಶಾಸಕರಾಗಿದ್ದರೆ, ಇನ್ನೊಬ್ಬರು ಮಾಜಿ ಸಂಸದ.

ಹರಿಶಂಕರ್‌ ಅವರು ಚಿಲ್ಲುಪುರ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಹರಿಶಂಕರ್‌ ಅವರು ಈ ಹಿಂದೆ ಭೂಗತ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ರೌಡಿಶೀಟರ್‌ ಆಗಿದ್ದ ಅವರ ಮೇಲೆ ಹಲವು ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಹರಿಶಂಕರ್‌ ಅವರು ಒಂದು ಅವಧಿಗೆ ಸಚಿವರೂ ಆಗಿದ್ದರು. 2012ರ ಬಳಿಕ ಅವರು ಚುನಾವಣೆಗೆ ಸ್ಪರ್ಧಿಸಿಲ್ಲ.

ADVERTISEMENT

ಅವರ ಮಗ ವಿನಯ ಶಂಕರ ತಿವಾರಿ ಅವರು 2017ರಲ್ಲಿ ಚಿಲ್ಲುಪುರ ಕ್ಷೇತ್ರದಿಂದ ಬಿಎಸ್‌ಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಇನ್ನೊಬ್ಬ ಮಗ ಭೀಷ್ಮ ಶಂಕರ ಅಲಿಯಾಸ್‌ ಕುಶಾಲ್‌ ತಿವಾರಿ ಅವರು 2007 ಮತ್ತು 2009ರಲ್ಲಿ ಸಂತ ಕಬೀರ್‌ ನಗರ ಲೋಕಸಭಾ ಕ್ಷೇತ್ರದಿಂದ ಬಿಎಸ್‌ಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಈ ಇಬ್ಬರೂ ಎಸ್‌ಪಿ ಸೇರುತ್ತಾರೆ ಎಂಬ ವದಂತಿ ದಟ್ಟವಾಗಿತ್ತು. ಹಾಗಾಗಿ, ಕೆಲ ದಿನಗಳ ಹಿಂದೆ ಅವರನ್ನು ಬಿಎಸ್‌ಪಿಯಿಂದ ವಜಾ ಮಾಡಲಾಗಿದೆ.

‘ರಾಜ್ಯದ ಪೂರ್ವಾಂಚಲ ಪ್ರದೇಶದಲ್ಲಿ ತಿವಾರಿ ಕುಟುಂಬವು ಭಾರಿ ಪ್ರಭಾವಿಯಾಗಿದೆ. ಇವರು ಎಸ್‌ಪಿ ಸೇರುವುದರಿಂದ ಅಖಿಲೇಶ್‌ ಯಾದವ್‌ ಅವರಿಗೆ ದೊಡ್ಡ ಮಟ್ಟದಲ್ಲಿ ಪ್ರಯೋಜನ ಆಗಲಿದೆ’ ಎಂದು ಲಖನೌನ ರಾಜಕೀಯ ವಿಶ್ಲೇಷಕರೊಬ್ಬರು ಹೇಳಿದ್ದಾರೆ.

ರಾಜ್ಯದ ಬ್ರಾಹ್ಮಣ ಸಮುದಾಯವು ಬಿಜೆಪಿಯ ಬಗ್ಗೆ ಅತೃಪ್ತವಾಗಿದೆ ಎಂದು ಹೇಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿಯೇ ತಿವಾರಿಕುಟುಂಬವು ಎಸ್‌ಪಿಗೆ ಸೇರ್ಪಡೆ ಆಗಿದ್ದು ಮಹತ್ವ ಪ‍ಡೆದಿದೆ.

ಯೋಗಿ ನೇತೃತ್ವದ ಸರ್ಕಾರವು ಬ್ರಾಹ್ಮಣ ಸಮುದಾಯವನ್ನು ಕಡೆಗಣಿಸಿದೆ ಎಂದು ಬಿಜೆ‍ಪಿ ಮುಖಂಡರೇ ಹೇಳುತ್ತಿರುವುದು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಬ್ರಾಹ್ಮಣ ಸಮುದಾಯದ ಸುರಕ್ಷತೆಗೆ ಸರ್ಕಾರ ಹೊಂದಿರುವ ಯೋಜನೆಗಳು ಏನು ಎಂದು ಲಂಬುಆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ದೇವಮಣಿ ದ್ವಿವೇದಿ ಅವರು ಇತ್ತೀಚೆಗೆ ಪ್ರಶ್ನಿಸಿದ್ದರು. ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಎಷ್ಟು ಬ್ರಾಹ್ಮಣರ ಹತ್ಯೆ ಆಗಿದೆ ಎಂದೂ ಅವರು ಕೇಳಿದ್ದರು.

ಬ್ರಾಹ್ಮಣ ಸಮುದಾಯವನ್ನು ನಿರ್ಲಕ್ಷಿಸಲಾಗಿದೆ ಎಂಬ ಆರೋಪಕ್ಕೆ ಉತ್ತರ ನೀಡುವುದಕ್ಕಾಗಿಯೇ, ಕಾಂಗ್ರೆಸ್‌ನಲ್ಲಿದ್ದ ಬ್ರಾಹ್ಮಣ ಸಮುದಾಯದ ನಾಯಕ ಜಿತಿನ್‌ ಪ್ರಸಾದ ಅವರನ್ನು ಬಿಜೆಪಿಗೆ ಸೇರಿಸಿಕೊಂಡು, ರಾಜ್ಯದ ಸಚಿವರನ್ನಾಗಿಯೂ ಮಾಡಲಾಗಿದೆ. ರಾಜ್ಯದಲ್ಲಿ ಬ್ರಾಹ್ಮಣರ ಜನಸಂಖ್ಯೆಯು ಶೇ 10ರಷ್ಟಿದೆ ಮತ್ತು 10ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳು ಹಾಗೂ 50ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಸಮುದಾಯವು ನಿರ್ಣಾಯಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.