ಲಖನೌ: ಉತ್ತರ ಪ್ರದೇಶದ ರಕ್ಷಣಾ ಕೈಗಾರಿಕಾ ಕಾರಿಡಾರ್‌ನಲ್ಲಿ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ತಯಾರಿಕಾ ಘಟಕ ನಿರ್ಮಾಣಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾನುವಾರ ಚಾಲನೆ ನೀಡಲಿದ್ದಾರೆ.
ಒಟ್ಟು 80 ಎಕರೆ ವಿಸ್ತೀರ್ಣದಲ್ಲಿ ಈ ಘಟಕವನ್ನು ಸ್ಥಾಪಿಸಲಾಗುತ್ತಿದ್ದು, ಘಟಕ ನಿರ್ಮಾಣಕ್ಕೆ ಬೇಕಾದ ಜಾಗವನ್ನು ಉತ್ತರ ಪ್ರದೇಶ ಸರ್ಕಾರವು ಉಚಿತವಾಗಿ ನೀಡಿದೆ. ಮೂರೂವರೆ ವರ್ಷದಲ್ಲಿ ಘಟಕದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.
₹300 ಕೋಟಿ ವೆಚ್ಚದಲ್ಲಿ ಈ ಘಟಕವನ್ನು ನಿರ್ಮಾಣ ಮಾಡಲಾಗುತ್ತಿದೆ. 290 ಕಿ.ಮೀನಿಂದ 400 ಕಿ.ಮೀ. ದೂರದವರೆಗೆ 3,430 ಕಿ.ಮೀ ವೇಗದಲ್ಲಿ ತೆರಳುವ ಬ್ರಹ್ಮೋಸ್ ಕ್ಷಿಪಣಿಗಳನ್ನು ಇಲ್ಲಿ ತಯಾರಿಸಲಾಗುವುದು. ಕ್ಷಿಪಣಿಯ ಬಿಡಿ ಭಾಗಗಳನ್ನು ಜೋಡಿಸುವ, ಕ್ಷಿಪಣಿಯನ್ನು ಪರೀಕ್ಷಿಸುವ ಸೌಲಭ್ಯವೂ ಇಲ್ಲಿ ಇರಲಿದೆ.
ಟೈಟಾನಿಯಂನಂಥ ಮಿಶ್ರಲೋಹ ತಯಾರಿಕಾ ಘಟಕವೂ ಇಲ್ಲಿ ಇರಲಿದ್ದು, ಅಂತರಿಕ್ಷಯಾನ ಮತ್ತು ರಕ್ಷಣಾ ವಲಯಗಳಿಗೆ ಬೇಕಾದ ಉತ್ತಮ ಗುಣಮಟ್ಟದ ಲೋಕದ ವಸ್ತುಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ರಕ್ಷಣಾ ಪರೀಕ್ಷಾ ಸೌಕರ್ಯ ವ್ಯವಸ್ಥೆಗೂ (ಡಿಟಿಐಎಸ್) ಭಾನುವಾರ ಶಂಕುಸ್ಥಾಪನೆ ನೆರವೇರಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.