ADVERTISEMENT

‘ತೃತೀಯ ಜಗತ್ತಿನ ರಾಷ್ಟ್ರಗಳಿಗೆ ಬ್ರಹ್ಮೋಸ್‌ ಕ್ಷಿಪಣಿ ರಫ್ತು’

ಪಿಟಿಐ
Published 12 ನವೆಂಬರ್ 2020, 14:18 IST
Last Updated 12 ನವೆಂಬರ್ 2020, 14:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅತ್ಯಾಧುನಿಕ ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ರೂಸ್‌ ಕ್ಷಿಪಣಿಯನ್ನು ತೃತೀಯ ಜಗತ್ತಿನ ರಾಷ್ಟ್ರಗಳಿಗೆ ರಫ್ತು ಮಾಡಲು ಭಾರತ ಹಾಗೂ ರಷ್ಯಾ ಯೋಜನೆ ರೂಪಿಸುತ್ತಿದೆ. ಫಿಲಿಪ್ಪೀನ್ಸ್‌ಗೆ ಈ ಕ್ಷಿಪಣಿಗಳು ಮೊದಲು ರಫ್ತಾಗಲಿದೆ ಎಂದು ರಷ್ಯಾ ಡೆಪ್ಯುಟಿ ಚೀಫ್‌ ಆಫ್‌ ಮಿಷನ್‌(ಡಿಸಿಎಂ) ರೋಮನ್‌ ಬಬುಶ್ಕಿನ್‌ ಗುರುವಾರ ತಿಳಿಸಿದರು.

ಭಾರತ ಹಾಗೂ ರಷ್ಯಾ ಜಂಟಿಯಾಗಿ ಈ ಕ್ಷಿಪಣಿಯನ್ನು ತಯಾರಿಸುತ್ತಿದ್ದು, ಜಲಾಂತರ್ಗಾಮಿ ನೌಕೆಗಳಿಂದ, ಯುದ್ಧ ನೌಕೆ, ಯುದ್ಧ ವಿಮಾನ ಹಾಗೂ ನೆಲದಿಂದಲೂ ಈ ಕ್ಷಿಪಣಿಯನ್ನು ಉಡಾವಣೆಗೊಳಿಸಬಹುದಾಗಿದೆ. ಕ್ಷಿಪಣಿ ರಫ್ತಿನ ಬಗ್ಗೆ ಫಿಲಿಪ್ಪೀನ್ಸ್‌ ಜೊತೆಗೆ ಪ್ರಾಥಮಿಕ ಹಂತದ ಮಾತುಕತೆಯನ್ನು ಭಾರತ ನಡೆಸಿದ್ದು, ಮುಂದಿನ ವರ್ಷಾರಂಭದಲ್ಲಿ ಕ್ಷಿಪಣಿ ರಫ್ತು ಕುರಿತಂತೆ ಒಪ್ಪಂದಕ್ಕೆ ಭಾರತ ಸಹಿ ಹಾಕುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಗಲ್ಫ್‌ ಪ್ರದೇಶದ ರಾಷ್ಟ್ರಗಳೂ ಕ್ಷಿಪಣಿ ಖರೀದಿಗೆ ಆಸಕ್ತಿ ಹೊಂದಿವೆ ಎನ್ನಲಾಗಿದೆ.

ಅತ್ಯಾಧುನಿಕ ಕ್ಷಿಪಣಿಯ ಹಲವು ಪರೀಕ್ಷೆಗಳನ್ನು ಕಳೆದ ಕೆಲ ವಾರದಲ್ಲಿ ನಡೆಸಲಾಗಿದ್ದು, ಕ್ಷಿಪಣಿಯ ಸಾಮರ್ಥ್ಯವು ಇದೀಗ 290 ಕಿ.ಮೀ. ನಿಂದ 400 ಕಿ.ಮೀ ಗೆ ಹೆಚ್ಚಳ ಮಾಡಲಾಗಿದೆ. ಆದರೆ ಕ್ಷಿಪಣಿಯ ವೇಗವು ಅಷ್ಟೇ ಇದ್ದು, ಪ್ರತಿ ಗಂಟೆಗೆ 3,457 ಕಿ.ಮೀ. ಕ್ರಮಿಸುವ ಸಾಮರ್ಥ್ಯವನ್ನು ಬ್ರಹ್ಮೋಸ್‌ ಹೊಂದಿದೆ. ‘ಕ್ಷಿಪಣಿಯ ಹೊಸ ಅವತರಣಿಕೆಯ ಎಲ್ಲ ಪರೀಕ್ಷೆಗಳು ಯಶಸ್ವಿಯಾಗಿದ್ದು, ಫಿಲಿಪ್ಪೀನ್ಸ್‌ನಿಂದ ಆರಂಭಗೊಳಿಸಿ ತೃತೀಯ ಜಗತ್ತಿನ ರಾಷ್ಟ್ರಗಳಿಗೆ ಈ ಕ್ಷಿಪಣಿಯು ರಫ್ತಾಗಲಿದೆ’ ಎಂದು ಆನ್‌ಲೈನ್‌ ಸುದ್ದಿಗೋಷ್ಠಿಯಲ್ಲಿ ರೋಮನ್‌ ತಿಳಿಸಿದರು.

ADVERTISEMENT

ಕಳೆದ ಅಕ್ಟೋಬರ್‌ನಲ್ಲಿ ನೌಕಾಪಡೆಗೆ ಸಿದ್ಧಪಡಿಸಿದ್ದ ಬ್ರಹ್ಮೋಸ್‌ ಕ್ಷಿಪಣಿಯನ್ನು ಅರ‌ಬ್ಬೀ ಸಮುದ್ರದಲ್ಲಿ ಭಾರತೀಯ ನೌಕಾಪಡೆಯು ಯಶಸ್ವಿಯಾಗಿ ಉಡಾವಣೆಗೊಳಿಸಿತ್ತು. ಇದಾದ ಕೆಲ ದಿನಗಳಲ್ಲೇ ಬಂಗಾಳ ಕೊಲ್ಲಿ ಪ್ರದೇಶದಲ್ಲಿ ಭಾರತೀಯ ವಾಯುಪಡೆಯು(ಐಎಎಫ್‌) ಸುಖೋಯ್‌ ಯುದ್ಧ ವಿಮಾನದಿಂದ ಬ್ರಹ್ಮೋಸ್‌ ಕ್ಷಿಪಣಿಯನ್ನು ಉಡಾವಣೆಗೊಳಿಸಿತ್ತು. ತನ್ನ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು 40 ಸುಖೋಯ್‌ ಯುದ್ಧ ವಿಮಾನದಲ್ಲಿ ಈ ಕ್ಷಿಪಣಿಯನ್ನು ಅಳವಡಿಸಲು ಐಎಎಫ್‌ ನಿರ್ಧರಿಸಿದೆ.

ಶೀಘ್ರದಲ್ಲೇ ಭಾರತಕ್ಕೆ ಎಸ್‌–400 ಕ್ಷಿಪಣಿ

400 ಕಿ.ಮೀ ವ್ಯಾಪ್ತಿಯಲ್ಲಿರುವ ಶತ್ರುರಾಷ್ಟ್ರಗಳ ಯುದ್ಧ ವಿಮಾನಗಳನ್ನು, ಕ್ಷಿಪಣಿಗಳು ಹಾಗೂ ಡ್ರೋನ್‌ಗಳನ್ನು ಹೊಡೆದುರುಳಿಸಲು ನೆಲದಿಂದ ಆಕಾಶಕ್ಕೆ ಉಡಾವಣೆಗೊಳಿಸುವ (ಸರ್ಫೇಸ್‌ ಟು ಏರ್‌) ಸಾಮರ್ಥ್ಯ ಹೊಂದಿರುವ ಎಸ್‌–400 ಕ್ಷಿಪಣಿಗಳನ್ನು ನಿಗದಿತ ಅವಧಿಯೊಳಗೇ ಭಾರತಕ್ಕೆ ಪೂರೈಸಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ ಎಂದು ರಷ್ಯಾ ಗುರುವಾರ ತಿಳಿಸಿದೆ.

2018ರ ಅಕ್ಟೋಬರ್‌ನಲ್ಲಿ ಅಂದಾಜು ₹38 ಸಾವಿರ ಕೋಟಿ ವೆಚ್ಚದಲ್ಲಿ ಐದು ಎಸ್‌–400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ಭಾರತ ರಷ್ಯಾ ಜೊತೆ ಒಪ್ಪಂದ ಮಾಡಿಕೊಂಡಿತ್ತು. ‘ಈ ಕ್ಷಿಪಣಿಗಳು 2021ರ ವರ್ಷಾಂತ್ಯದೊಳಗೆ ಭಾರತಕ್ಕೆ ಸರಬರಾಜು ಆಗಲಿವೆ. ಈ ಅವಧಿಗಿಂತ ಮುಂಚಿತವಾಗಿಯೇ ಇದನ್ನು ಪೂರೈಸಲು ರಷ್ಯಾ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ’ ಎಂದು ಡಿಸಿಎಂ ರೋಮನ್‌ ತಿಳಿಸಿದರು. ಚೀನಾ ಹಾಗೂ ಪಾಕಿಸ್ತಾನದ ಅತಿಕ್ರಮಣದ ಹಿನ್ನೆಲೆಯಲ್ಲಿ ನಿಗದಿತ ಅವಧಿಗಿಂತ ಮುಂಚಿತವಾಗಿ ಈ ಕ್ಷಿಪಣಿಗಳನ್ನು ಪೂರೈಸಲು ರಷ್ಯಾಗೆ ಭಾರತ ಇತ್ತೀಚೆಗೆ ಮನವಿ ಮಾಡಿತ್ತು.

‘ಭಾರತ–ರಷ್ಯಾ ಜಂಟಿ ಯೋಜನೆಯಡಿ 200 ಕಮೋವ್‌ ಕೆಎ–226ಟಿ ಯುದ್ಧ ಹೆಲಿಕಾಪ್ಟರ್‌ಗಳ ಖರೀದಿ ಒಪ್ಪಂದ ಹಾಗೂ ಭಾರತದಲ್ಲೇ 7 ಲಕ್ಷ ಎಕೆ–47 203 ರೈಫಲ್‌ಗಳ ಉತ್ಪಾದನೆ ಒಪ್ಪಂದವು ಅಂತಿಮ ಹಂತದಲ್ಲಿವೆ’ ಎಂದು ರೋಮನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.