ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲೂ ಮತಗಳವು ನಡೆದಿದೆ ಎಂದು ಆರೋಪಿಸಿರುವ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಬ್ರೆಜಿಲ್ ರೂಪದರ್ಶಿಯೊಬ್ಬರ ಫೋಟೊ ಬಳಸಿಕೊಂಡು ಬೇರೆ ಬೇರೆ ಹೆಸರಿನಲ್ಲಿ 22 ಬಾರಿ ಮತದಾನ ಮಾಡಲಾಗಿದೆ ಎಂದಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ರಾಹುಲ್, ‘ಮತಗಳ್ಳತನದ ಮೂಲಕ ಹರಿಯಾಣದಲ್ಲಿ ಕಾಂಗ್ರೆಸ್ ಗೆಲುವನ್ನು ಬಿಜೆಪಿ ಕಸಿದುಕೊಂಡಿದೆ’ ಎಂದು ಹೇಳಿದ್ದಾರೆ.
‘ಸ್ಕ್ರೀನ್ ಮೇಲೆ ಇರುವ ಈ ಮಹಿಳೆ ಯಾರು? ಆಕೆಯ ಹೆಸರೇನು? ಆಕೆ ಎಲ್ಲಿಂದ ಬಂದಿದ್ದಾಳೆ?.... ಆದರೆ, ಆಕೆ ಹರಿಯಾಣದ 10 ಮತಗಟ್ಟೆಗಳಲ್ಲಿ 22 ಬಾರಿ ಮತದಾನ ಮಾಡಿದ್ದಾಳೆ. ಸೀಮಾ, ಸ್ವೀಟಿ, ಸರಸ್ವತಿ, ರಶ್ಮಿ, ವಿಲ್ಮಾ ಹೀಗೆ ನಾನಾ ಹೆಸರುಗಳನ್ನು ಹೊಂದಿದ್ದಾಳೆ. ಆದರೆ ಆಕೆ ವಾಸ್ತವವಾಗಿ ಬ್ರೆಜಿಲ್ ಮಾಡೆಲ್ ಎಂದು ತಿಳಿದುಬಂದಿದೆ’ ಎಂದು ಹೇಳಿದ್ದಾರೆ.
‘ಈ ಮಾಡೆಲ್ ಫೋಟೊ ಹರಿಯಾಣ ಮತದಾರರ ಪಟ್ಟಿಯಲ್ಲಿ ಸೀಮಾ, ಸ್ವೀಟಿ, ಸರಸ್ವತಿ ಮುಂತಾದ ಹೆಸರುಗಳಲ್ಲಿ 22 ಬಾರಿ ನಮೂದಾಗಿದೆ’ ಎಂದು ಇದೇ ವೇಳೆ ವಿವರಿಸಿದ್ದಾರೆ.
‘ಕಾಂಗ್ರೆಸ್ಸಿನ ಅಭೂತಪೂರ್ವ ಗೆಲುವನ್ನು ಸೋಲಾಗಿ ಪರಿವರ್ತಿಸಲು ಒಂದು ಯೋಜನೆಯನ್ನು ರೂಪಿಸಿರುವುದು ನಮಗೆ ಖಚಿತವಾಗಿದೆ. ಭಾರತ ಯುವಜನರು ಇದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ’ ಎಂದಿದ್ದಾರೆ.
ಮತಗಳ್ಳತನ ಕೆಲಸದಲ್ಲಿ ಬಿಜೆಪಿಗೆ ಚುನಾವಣಾ ಆಯೋಗ ಸಹಾಯ ಮಾಡುತ್ತಿದೆ ಎಂದೂ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.