ADVERTISEMENT

ಜಾಗತಿಕ ಆರ್ಥಿಕ ಚೇತರಿಕೆಗೆ ಬ್ರಿಕ್ಸ್‌ ಸಹಕಾರ ಅಗತ್ಯ: ಮೋದಿ

ಪಿಟಿಐ
Published 23 ಜೂನ್ 2022, 15:45 IST
Last Updated 23 ಜೂನ್ 2022, 15:45 IST
ಬ್ರಿಕ್ಸ್‌ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ
ಬ್ರಿಕ್ಸ್‌ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ‘ಬ್ರಿಕ್ಸ್‌’ ಸದಸ್ಯ ರಾಷ್ಟ್ರಗಳಪರಸ್ಪರ ಸಹಕಾರವು ಕೋವಿಡ್ ನಂತರ ಜಾಗತಿಕ ಆರ್ಥಿಕ ಚೇತರಿಕೆಗೆ ಉಪಯುಕ್ತ ಕೊಡುಗೆ ನೀಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದರು.

ಚೀನಾ ಅಧ್ಯಕ್ಷ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ಉನ್ನತ ನಾಯಕರ ಸಮ್ಮುಖದಲ್ಲಿ ವರ್ಚುವಲ್‌ ಆಗಿ ನಡೆದ ಬ್ರಿಕ್ಸ್‌ನವಾರ್ಷಿಕ ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮೋದಿ ಈ ವಿಷಯ ತಿಳಿಸಿದರು. ಈ ವರ್ಷದ ಅಧ್ಯಕ್ಷತೆ ವಹಿಸಿರುವ ಚೀನಾ ಶೃಂಗಸಭೆಯನ್ನು ಆಯೋಜಿಸಿದೆ.

ವಿಶ್ವದ ಐದು ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳಾದಬ್ರೆಜಿಲ್‌, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾವನ್ನು ಒಳಗೊಂಡಿರುವ ಸಂಘಟನೆಯೇ ‘ಬ್ರಿಕ್ಸ್‌’. ಈ ದೇಶಗಳು ಜಾಗತಿಕ ಜನಸಂಖ್ಯೆಯ ಶೇ 41ರಷ್ಟು, ಜಾಗತಿಕ ಜಿಡಿಪಿಯ ಶೇ 24ರಷ್ಟು ಮತ್ತು ಜಾಗತಿಕ ವ್ಯಾಪಾರದ ಶೇ 16ರಷ್ಟು ಪಾಲನ್ನು ಹೊಂದಿವೆ.

ADVERTISEMENT

ಕೆಲವು ವರ್ಷಗಳಲ್ಲಿ ಬ್ರಿಕ್ಸ್‌ನಲ್ಲಿ ಕೈಗೊಂಡ ರಚನಾತ್ಮಕ ಬದಲಾವಣೆಗಳು ಗುಂಪಿನ ಪ್ರಭಾವವನ್ನು ಹೆಚ್ಚಿಸಿವೆ. ‘ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್’ (ಎನ್‌ಡಿಬಿ) ಸದಸ್ಯತ್ವವು ಹೆಚ್ಚಿರುವುದು ಸಂತೋಷದ ವಿಷಯ. ಸದಸ್ಯ ರಾಷ್ಟ್ರಗಳ ನಡುವಿನ ಸಹಕಾರವು ಅವರ ನಾಗರಿಕರಿಗೆ ಪ್ರಯೋಜನವನ್ನೂ ತಂದಿದೆ ಎಂದು ಮೋದಿ ಹೇಳಿದರು.

ಶೃಂಗದಲ್ಲಿ ನಡೆಯುವ ಚರ್ಚೆಗಳು ಸದಸ್ಯ ದೇಶಗಳ ನಡುವಿನ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತವೆ ಎಂಬ ವಿಶ್ವಾಸವಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.