ADVERTISEMENT

ಡೋಡ: ಮುಂದುವರಿದ ಸೇನಾ ಕಾರ್ಯಾಚರಣೆ

ಪಿಟಿಐ
Published 17 ಜುಲೈ 2024, 15:08 IST
Last Updated 17 ಜುಲೈ 2024, 15:08 IST
<div class="paragraphs"><p>ಹುತಾತ್ಮರಾದ ಅಜಯ್‌ ಸಿಂಗ್‌ ಮತ್ತು ಬಿಜೇಂದ್ರ ಅವರ ಪಾರ್ಥಿವ ಶರೀರಗಳಿಗೆ ಜೈಪುರದಲ್ಲಿ ಸೇನೆ ಬುಧವಾರ ಪುಷ್ಪ ನಮನ ಸಲ್ಲಿಸಿತು</p></div>

ಹುತಾತ್ಮರಾದ ಅಜಯ್‌ ಸಿಂಗ್‌ ಮತ್ತು ಬಿಜೇಂದ್ರ ಅವರ ಪಾರ್ಥಿವ ಶರೀರಗಳಿಗೆ ಜೈಪುರದಲ್ಲಿ ಸೇನೆ ಬುಧವಾರ ಪುಷ್ಪ ನಮನ ಸಲ್ಲಿಸಿತು

   

–ಪಿಟಿಐ

ಜಮ್ಮು : ಜಮ್ಮು ಮತ್ತು ಕಾಶ್ಮೀರದ ಡೋಡ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಾಲ್ಕು ಗಂಟೆಗಳ ಅವಧಿಯಲ್ಲಿ ಎರಡು ಬಾರಿ ಗುಂಡಿನ ಚಕಮಕಿ ನಡೆದಿವೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ADVERTISEMENT

ದೇಸಾ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ಮುಂದುವರಿದಿದ್ದು, ಮಂಗಳವಾರ ರಾತ್ರಿ 10.45ಕ್ಕೆ ಕಲಾನ್‌ ಭಾಟಾ ಬಳಿ ಹಾಗೂ ನಸುಕಿನ 2 ಗಂಟೆಗೆ ಪಂಚನ್‌ ಭಾಟಾ ಬಳಿ ಗುಂಡಿನ ದಾಳಿ ನಡೆದಿವೆ ಎಂದು ಅವರು ಹೇಳಿದರು. ದೇಸಾ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು.

ಮಂಗಳವಾರ ರಾತ್ರಿ ನಡೆದ ದಾಳಿಯಲ್ಲಿ ಯಾವುದೇ ಸಾವು–ನೋವು ಸಂಭವಿಸಿದ ವರದಿಯಾಗಿಲ್ಲ. ಕತ್ತಲೆ, ಸವಾಲಿನ ಭೂಪ್ರದೇಶದ ಲಾಭ ಪಡೆದುಕೊಂಡ ಭಯೋತ್ಪಾದಕರು ಅಲ್ಲಿಂದ ಪಾರಾಗುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಪಾಕಿಸ್ತಾನ ಮೂಲದ ನಿಷೇಧಿತ ಜೈಶ್‌–ಎ–ಮೊಹಮ್ಮದ್‌ (ಜೆಇಎಂ) ಉಗ್ರರ ಗುಂಪಿನ ಜತೆ ಸಂಪರ್ಕ ಹೊಂದಿರುವ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ಸೋಮವಾರದಿಂದಲೂ ನಡೆಯುತ್ತಿದೆ. ರಾಷ್ಟ್ರೀಯ ರೈಫಲ್ಸ್‌, ಜಮ್ಮು ಮತ್ತು ಕಾಶ್ಮೀರದ ವಿಶೇಷ ಕಾರ್ಯಾಚರಣೆ ಪಡೆಗಳು ಈ ಭಾಗದಲ್ಲಿನ ಸವಾಲಿನ ಭೂ ಪ್ರದೇಶ ಮತ್ತು ಹವಾಮಾನದ ಅಡೆತಡೆ ನಡುವೆಯೂ ಜಂಟಿ ಕಾರ್ಯಾಚರಣೆ ಮುಂದುವರಿಸಿವೆ. 

ಗಡಿಯಿಂದ ನುಸುಳಿರುವ ಭಯೋತ್ಪಾದಕರು ಅರಣ್ಯ ಪ್ರದೇಶದಲ್ಲಿ ಆಶ್ರಯ ಕಂಡುಕೊಂಡಿದ್ದಾರೆ. ಅವರನ್ನು ಮಟ್ಟಹಾಕಲು ಸೇನೆಯು ಪ್ಯಾರಾ ಕಮಾಂಡೊಗಳು, ಡ್ರೋನ್‌ ಮತ್ತು ಹೆಲಿಕಾಪ್ಟರ್‌ಗಳ ನೆರವು ಪಡೆದು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯ ಪಿಡುಗನ್ನು ತೊಡೆದುಹಾಕಲು ಉತ್ತರ ಕಮಾಂಡ್‌ ಬದ್ಧವಾಗಿದ್ದು, ಇದಕ್ಕಾಗಿ ನಿರಂತರ ಕಾರ್ಯಾಚರಣೆಗಳು ಮುಂದುವರಿಯಲಿವೆ ಎಂದು ಸೇನೆ ಹೇಳಿದೆ.

ಜೈಪುರದಲ್ಲಿ ಇಬ್ಬರು ಹುತಾತ್ಮರಿಗೆ ನಮನ

ಜೈಪುರ: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಅಜಯ್‌ ಸಿಂಗ್‌ ಮತ್ತು ಬಿಜೇಂದ್ರ ಅವರ ಪಾರ್ಥಿವ ಶರೀರವನ್ನು ಬುಧವಾರ ಇಲ್ಲಿಗೆ ವಿಶೇಷ ವಿಮಾನದ ಮೂಲಕ ತರಲಾಯಿತು.

ರಾಜಸ್ಥಾನದ ಕೆಲ ಸಚಿವರು ರಾಜಕಾರಣಿಗಳು ಮತ್ತು ಸೇನಾ ಅಧಿಕಾರಿಗಳು ಜೈಪುರ ವಿಮಾನ ನಿಲ್ದಾಣದಲ್ಲಿ ಹುತಾತ್ಮ ಯೋಧರಿಗೆ ಪುಷ್ಪ ನಮನ ಸಲ್ಲಿಸಿದರು. ‌ಬಳಿಕ ಅವರ ಮೃತದೇಹಗಳನ್ನು ಅಂತ್ಯಕ್ರಿಯೆಗಾಗಿ ಜುಂಜುನುಗೆ ತರಲಾಯಿತು.  ಅಜಯ್‌ ಸಿಂಗ್‌ ಅವರು ಭೈಸಾವತ ಕಲನ್‌ ಗ್ರಾಮದವರಾಗಿದ್ದರೆ ಬಿಜೇಂದ್ರ ಅವರು ದುಮೋಲಿ ಕಲಾನ್‌ ಗ್ರಾಮದವರು.

ಶ್ರೀಕಾಕುಳಂ: ಎರಡು ದಿನದಲ್ಲಿ ಇಬ್ಬರು ಯೋಧರ ಸಾವು

ಶ್ರೀಕಾಕುಳಂ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿ ಹುತಾತ್ಮರಾದ ಮತ್ತೊಬ್ಬ ಯೋಧ ಡಿ. ರಾಜೇಶ್‌ (25) ಆಂಧ್ರಪ್ರದೇಶದ ಶ್ರೀಕಾಕುಳಂನವರು. ಇದೇ ಜಿಲ್ಲೆಗೆ ಸೇರಿದ ಯೋಧ ಎಸ್‌. ಜಗದೇಶ್ವರ ರಾವ್‌ ಅವರು ಎರಡು ದಿನಗಳ ಹಿಂದೆಯಷ್ಟೇ ಹುತಾತ್ಮರಾಗಿದ್ದರು. 

‘ಕಾರ್ಯಾಚರಣೆ ವೇಳೆ ಉಗ್ರರ ಗುಂಡು ಅಣ್ಣನ ಎದೆಗೆ ತಗುಲಿತು ಎಂಬ ಮಾಹಿತಿ ದೊರೆತಿದೆ. ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಕಾಯುತ್ತಿದ್ದೇವೆ’ ಎಂದು ರಾಜೇಶ್‌ ಅವರ ತಮ್ಮ ಡಿ. ಮಧುಸೂದನ್‌ ರಾವ್‌ ಪ್ರತಿಕ್ರಿಯಿಸಿದ್ದಾರೆ. ರಾಜೇಶ್‌ ಅವರು ಸೇನೆ ಸೇರಿ ಆರು ವರ್ಷಗಳಾಗಿತ್ತು. ಮೂರು ತಿಂಗಳ ಹಿಂದೆಯಷ್ಟೇ ಮನೆಗೆ ಬಂದಿದ್ದ ಅವರು ಅವಿವಾಹಿತರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.