ADVERTISEMENT

ಕ್ರೈಸ್ತ ಸನ್ಯಾಸಿನಿಯರ ಬಂಧನ ಸಂವಿಧಾನಬಾಹಿರ: ಬೃಂದಾ ಕಾರಟ್‌

ಪಿಟಿಐ
Published 30 ಜುಲೈ 2025, 14:17 IST
Last Updated 30 ಜುಲೈ 2025, 14:17 IST
ಬೃಂದಾ ಕಾರಟ್‌
ಬೃಂದಾ ಕಾರಟ್‌   

ದುರ್ಗ್‌ (ಛತ್ತೀಸಗಢ): ‘ಮಾನವ ಕಳ್ಳಸಾಗಣೆ ಮತ್ತು ಬಲವಂತದ ಮತಾಂತರದ ಆರೋಪದ ಮೇಲೆ ಇಬ್ಬರು ಕ್ಯಾಥೋಲಿಕ್‌ ಸನ್ಯಾಸಿನಿಯರನ್ನು ಬಂಧಿಸಿರುವುದು ಸಂವಿಧಾನಬಾಹಿರ ಮತ್ತು ಅಕ್ರಮ’ ಎಂದು ಸಿಪಿಐ(ಎಂ) ಹಿರಿಯ ನಾಯಕಿ ಬೃಂದಾ ಕಾರಟ್‌ ಆಕ್ರೋಶ ವ್ಯಕ್ತಪಡಿಸಿದರು.

ಬಂಧನದಲ್ಲಿರುವ ಕೇರಳದ ಸನ್ಯಾಸಿನಿಯರಾದ ಪ್ರೀತಿ ಮೇರಿ, ವಂದನಾ ಫ್ರಾನ್ಸಿಸ್‌ ಅವರನ್ನು ಜೈಲಿನಲ್ಲಿ ಬುಧವಾರ ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಬಿಜೆಪಿ ಮತ್ತು ಛತ್ತೀಸಗಢ ಸರ್ಕಾರದ ಸಂಕುಚಿತ ಕಾರ್ಯಸೂಚಿಯ ಭಾಗವಾಗಿ ಈ ಬಂಧನ ಆಗಿದೆ. ಕೂಡಲೇ ಈ ಇಬ್ಬರನ್ನೂ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು. ಇದು ದೇಶದಲ್ಲಿ ಕ್ರೈಸ್ತರನ್ನು ಗುರಿಯಾಗಿಸಿ ನಡೆದ ದಾಳಿಯಾಗಿದೆ ಎಂದು ಅವರು ದೂರಿದರು.

ADVERTISEMENT

ವಿಶೇಷ ನ್ಯಾಯಾಲಯಕ್ಕೆ ಹೋಗಿ: ಇಬ್ಬರು ಸನ್ಯಾಸಿನಿಯರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸಿದ ದುರ್ಗ್‌ ಜಿಲ್ಲಾ ಸೆಷನ್ಸ್‌ ನ್ಯಾಯಾಲಯವು, ‘ಈ ಜಾಮೀನು ಅರ್ಜಿಗಳನ್ನು ಆಲಿಸುವ ಅಧಿಕಾರ ವ್ಯಾಪ್ತಿ ತನಗಿಲ್ಲ, ಅದಕ್ಕಾಗಿ ವಿಶೇಷ ನ್ಯಾಯಾಲಯಕ್ಕೆ ಹೋಗಬಹುದು’ ಎಂದು ಹೇಳಿ ಅರ್ಜಿ ವಿಲೇವಾರಿ ಮಾಡಿತು.

ಕ್ರೈಸ್ತ ಸನ್ಯಾಸಿನಿಯರ ಬಂಧನ: ಪ್ರಿಯಾಂಕಾ ಪ್ರತಿಭಟನೆ

ಕ್ಯಾಥೊಲಿಕ್‌ ಸನ್ಯಾಸಿನಿಯರ ಬಂಧನ ಖಂಡಿಸಿ ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಂಸತ್‌ ಭವನದ ಆವರಣದಲ್ಲಿ ಬುಧವಾರ ಕೇರಳದ ಹಲವು ವಿಪಕ್ಷ ಸಂಸದರ ಜೊತೆಗೂಡಿ ಪ್ರತಿಭಟನೆ ನಡೆಸಿದರು.

ದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯ ಹೆಚ್ಚುತ್ತಿದೆ ಎಂದು ಇದೇ ವೇಳೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಲೋಕಸಭೆ ಕಲಾಪ ಆರಂಭಕ್ಕೂ ಮುನ್ನ ಪ್ರಿಯಾಂಕಾ ಅವರೊಂದಿಗೆ ಕಾಂಗ್ರೆಸ್‌ನ ಕೆ.ಸಿ.ವೇಣುಗೋಪಾಲ್ ಆರ್‌ಎಸ್‌ಪಿ ಸಂಸದ ಎನ್‌.ಕೆ. ಪ್ರೇಮಚಂದ್ರನ್‌ ಮತ್ತು ಕೇರಳದ ಕಾಂಗ್ರೆಸ್‌ ಸಂಸದರು ಕ್ರೈಸ್ತ ಸನ್ಯಾಸಿನಿಯರ ಬಿಡುಗಡೆಗೆ ಆಗ್ರಹಿಸಿ ಸಂಸತ್ತಿನ ಮಕರದ್ವಾರದ ಬಳಿ ಪ್ರತಿಭಟನೆ ನಡೆಸಿದರು.

ಲೋಕಸಭೆಯಲ್ಲಿ ಚರ್ಚೆ:

ಈ ವಿಷಯವನ್ನು ಲೋಕಸಭೆಯಲ್ಲಿ ಬುಧವಾರ ಕಾಂಗ್ರೆಸ್‌ ಪ್ರಸ್ತಾಪಿಸಿ ಚರ್ಚಿಸಿತು. ಕಾಂಗ್ರೆಸ್‌ ಸಂಸದರಾದ ಕೆ.ಸಿ.ವೇಣುಗೋಪಾಲ್‌ ಕೆ. ಫ್ರಾನ್ಸಿಸ್‌ ಜಾರ್ಜ್‌ ಕೆ.ಸುರೇಶ್‌ ಅವರು ಶೂನ್ಯ ವೇಳೆಯಲ್ಲಿ ಇದನ್ನು ಪ್ರಸ್ತಾಪಿಸಿ ಕ್ರೈಸ್ತ ಸನ್ಯಾನಿಸಿನಿಯರ ಬಿಡುಗಡೆಗೆ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದರು.

ಇದನ್ನು ದುರ್ಗ್‌ನ ಬಿಜೆಪಿ ಸಂಸದ ವಿಜಯ್‌ ಬಾಘೇಲ್‌ ವಿರೋಧಿಸಿದರು. ಕೋಮು ಸೌಹಾರ್ದ ಕದಡಳು ಕಾಂಗ್ರೆಸ್‌ ಪಿತೂರಿ ನಡೆಸುತ್ತಿದೆ ಎಂದು ದೂರಿದ ಅವರು ಸನ್ಯಾಸಿನಿಯರನ್ನು ಬಂಧಿಸಿದ ಛತ್ತೀಸಗಢ ಸರ್ಕಾರದ ಕ್ರಮವನ್ನು  ಸಮರ್ಥಿಸಿಕೊಂಡರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.