ADVERTISEMENT

ಮಾನ್ಸೂನ್ ಕೊಡುಗೆ; 100 ಶಾಸಕರನ್ನು ಕರೆತನ್ನಿ, ಸರ್ಕಾರ ರಚಿಸಿ: ಅಖಿಲೇಶ್ ಪೋಸ್ಟ್‌

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 10:50 IST
Last Updated 18 ಜುಲೈ 2024, 10:50 IST
<div class="paragraphs"><p>ಅಖಿಲೇಶ್ ಯಾದವ್‌</p></div>

ಅಖಿಲೇಶ್ ಯಾದವ್‌

   

ಪಿಟಿಐ

ಲಖನೌ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾದ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಗುರಿಯಾಗಿರಿಸಿ, ‘ಸರ್ಕಾರವು ಪಕ್ಷಕ್ಕಿಂತ ದೊಡ್ಡದಲ್ಲ’ ಎಂದು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಕೆಣಕಿದ್ದರು. ಇಬ್ಬರ ನಡುವಿನ ಮುಸುಕಿನ ಗುದ್ದಾಟದ ಬೆನ್ನಲ್ಲೇ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು ಡಿಸಿಎಂಗೆ ಭರ್ಜರಿ ಆಫರ್‌ ನೀಡಿದ್ದಾರೆ.

ADVERTISEMENT

‘ಮಾನ್ಸೂನ್ ಕೊಡುಗೆ; 100 ಶಾಸಕರನ್ನು ಕರೆತನ್ನಿ, ಸರ್ಕಾರ ರಚಿಸಿ’ ಎಂದು ‘ಎಕ್ಸ್‌’ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

ಈ ಹಿಂದೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಅಖಿಲೇಶ್‌ ಯಾದವ್‌, ‘ಕೇಶವ್‌ ಪ್ರಸಾದ್‌ ಮೌರ್ಯ ಅವರು ಯೋಗಿ ಆದಿತ್ಯನಾಥ ವಿಷಯದಲ್ಲಿ ಅಸಮಾಧಾನ ಹೊಂದಿರುವುದು ಎಲ್ಲರಿಗೂ ತಿಳಿದ ವಿಚಾರ. ನೂರು ಶಾಸಕರನ್ನು ಕರೆತಂದರೆ, ಸರ್ಕಾರ ರಚನೆಗೆ ಬೆಂಬಲಿಸಲು ಸಿದ್ಧ’ ಎಂದು ಹೇಳಿದರು. 

ಯೋಗಿ ಆದಿತ್ಯನಾಥ ವಿರುದ್ಧ ದೂರು ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಲು ಕೇಶವ್‌ ಪ್ರಸಾದ್‌ ಮೌರ್ಯ ದೆಹಲಿಗೆ ತೆರಳಿದ್ದರೂ ಭೇಟಿಗೆ ಅವಕಾಶ ಸಿಗದೇ ಮರಳಿದ್ದರು. 

ಈ ಬೆಳವಣಿಗೆ ಬೆನ್ನಲ್ಲೇ, ‘ಯಾವುದೇ ಯಶಸ್ಸು ಇಲ್ಲದೇ ಮರಳಿ ಮನೆಗೆ’ ಎಂದು ‘ಎಕ್ಸ್‌’ನಲ್ಲಿ ಸಂದೇಶ ಹಾಕುವ ಮೂಲಕ ಮೌರ್ಯ ಅವರನ್ನು ಕುರಿತು ಅಖಿಲೇಶ್‌ ಯಾದವ್‌ ಈ ಹಿಂದೆ ವ್ಯಂಗ್ಯವಾಡಿದ್ದರು. 

‘ಸಂಘಟನೆಗಿಂತಲೂ ಸರ್ಕಾರವೇ ಮುಖ್ಯ’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೇಳಿಕೆ ನೀಡಿದ್ದರು. ಪಕ್ಷದ ಕಾರ್ಯಕಾರಿಣಿಯಲ್ಲಿ ತಿರುಗೇಟು ನೀಡಿದ್ದ ಡಿಸಿಎಂ ಕೇಶವ್‌ ಪ್ರಸಾದ್‌ ಮೌರ್ಯ ಅವರು ‘ಸರ್ಕಾರವು ಪಕ್ಷಕ್ಕಿಂತ ದೊಡ್ಡದಲ್ಲ’ ಎಂದು ತಿಳಿಸಿದ್ದರು.

ಇದಾದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿದ್ದ ಮೌರ್ಯ,‘ರಾಜ್ಯದಲ್ಲಿ ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ’ ಎಂದು ದೂರು ನೀಡಿದ್ದರು.

‘ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಬದಿಗಿಟ್ಟು, ಮುಂಬರುವ 10 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸಬೇಕು. ಫಲಿತಾಂಶದ ನಂತರ, ರಾಜ್ಯ ಬಿಜೆಪಿ ಘಟಕದಲ್ಲಿ ಮಹತ್ತರ ಬದಲಾವಣೆ ಮಾಡಲಾಗುವುದು’ ಎಂದು ಬಿಜೆಪಿ ಹೈಕಮಾಂಡ್‌ ಅಸಮಾಧಾನಗೊಂಡಿದ್ದ ನಾಯಕರಿಗೆ ಸೂಚನೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.