ADVERTISEMENT

ತೆಲಂಗಾಣ ರಾಜಕೀಯ: ಬಿಜೆಪಿಯೊಂದಿಗೆ ಬಿಆರ್‌ಎಸ್ ಮೈತ್ರಿ ಸಾಧ್ಯತೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಮೇ 2025, 10:14 IST
Last Updated 23 ಮೇ 2025, 10:14 IST
   

ಹೈದರಾಬಾದ್‌: ಏಪ್ರಿಲ್‌ 27ರಂದು ವಾರಂಗಲ್‌ನಲ್ಲಿ ನಡೆದ ಬಿಆರ್‌ಎಸ್‌ ಪಕ್ಷದ ಬೃಹತ್‌ ಸಮಾವೇಶದ ಕುರಿತಂತೆ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್‌ ಅವರಿಗೆ ಮಗಳು ಹಾಗೂ ಪಕ್ಷದ ನಾಯಕಿ ಕೆ.ಕವಿತಾ ಅವರು ಕೈಬರಹದಲ್ಲಿ ಬರೆದಿದ್ದಾರೆ ಎನ್ನಲಾದ ಪ್ರತಿಕ್ರಿಯೆ ಪತ್ರವು ತೆಲಂಗಾಣ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಪತ್ರದ ನೈಜತೆ ಕುರಿತಂತೆ ದೃಢಪಟ್ಟಿಲ್ಲ. ಕವಿತಾ ಅಥವಾ ಕೆಸಿಆರ್‌ ಕೂಡ ಈ ಬಗ್ಗೆ ಖಚಿತಪಡಿಸಿಲ್ಲ. ಸಭೆಯ ಕುರಿತು ಸಕಾರಾತ್ಮಕ ಹಾಗೂ ಋಣಾತ್ಮಕ ಪ್ರತಿಕ್ರಿಯೆಯನ್ನು ಈ ಪತ್ರವು ಒಳಗೊಂಡಿದೆ.

‘ನೀವು (ಕೆಸಿಆರ್‌) ಬಿಜೆಪಿ ಬಗ್ಗೆ ಎರಡು ನಿಮಿಷವಷ್ಟೇ ಮಾತನಾಡಿದ್ದೀರಿ. ಆಗಲೇ ಕೆಲವರು ಬಿಜೆಪಿ ಜೊತೆಗೆ ಭವಿಷ್ಯದಲ್ಲಿ ಮೈತ್ರಿಯಾಗಲಿದೆ ಎಂದು ವದಂತಿ ಹರಡುತ್ತಿದ್ದಾರೆ. ನಾವು ಮೊದಲಿನಿಂದಲೂ ಬಿಜೆಪಿ ವಿರುದ್ಧ ಕಠಿಣವಾಗಿ ಮಾತನಾಡುತ್ತಿದ್ದೇವೆ. ನಾನು (ಬಿಜೆಪಿ) ಅವರಿಂದಲೇ ಸಾಕಷ್ಟು ನೋವುಂಡಿದ್ದೇನೆ. ನೀವು ಕೂಡ ಹೆಚ್ಚು ಪರಿಣಾಮಕಾರಿಯಾಗಿ ಬಿಜೆಪಿ ವಿರುದ್ಧ ಮಾತನಾಡಬೇಕು’ ಎಂದು ತೆಲುಗು ಹಾಗೂ ಇಂಗ್ಲಿಷ್‌ನಲ್ಲಿ ಕವಿತಾ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. 

ADVERTISEMENT

‘ತಳಮಟ್ಟದಲ್ಲಿ ಕಾಂಗ್ರೆಸ್‌ ಪಕ್ಷವು ತನ್ನ ಬೆಂಬಲ ಕಳೆದುಕೊಂಡಿದ್ದು, ಬಿಆರ್‌ಎಸ್‌ ಪಕ್ಷದ ಕಾರ್ಯಕರ್ತರು ಬಿಜೆಪಿಯನ್ನು ರಾಜ್ಯದಲ್ಲಿ ಪರ್ಯಾಯ ಆಯ್ಕೆಯಾಗಿ ಪರಿಗಣಿಸುತ್ತಿದ್ದಾರೆ. ವಾರಂಗಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತೆಲಂಗಾಣ ಹೋರಾಟ ಕಾರ್ಯಕರ್ತರು ಸರಿಯಾಗಿ ನಡೆಸಿಕೊಂಡಿಲ್ಲ’ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದೂ ಚರ್ಚಿಸಲಾಗುತ್ತಿದೆ.

ಇತ್ತೀಚಿಗೆ ನಡೆದ ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಆರ್‌ಎಸ್‌ನಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರಿಂದಲೇ ಪಕ್ಷವು ಈ ನಿರ್ಧಾರ ತೆಗೆದುಕೊಂಡಿತ್ತು ಎಂದು ಕಾರ್ಯಕರ್ತರು ಭಾವಿಸಿದ್ದರು ಎಂದೂ ಕವಿತಾ ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.

ಈ ಬೆಳವಣಿಗೆ ನಡೆದು, ಹಲವು ದಿನಗಳು ಕಳೆದಿದ್ದರೂ ಬಿಆರ್‌ಎಸ್‌ ಈ ಬೆಳವಣಿಗೆಯನ್ನು ನಿರಾಕರಿಸಿಲ್ಲ. ಮಗನ ಪದವಿ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಕವಿತಾ ಅವರು ಅಮೆರಿಕಕ್ಕೆ ತೆರಳಿದ್ದು, ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.

‘ಅಕ್ರಮವಾಗಿ ಗಳಿಸಿದ ಸಂಪತ್ತು ಹಾಗೂ ಅಧಿಕಾರದಿಂದ ಕೆಸಿಆರ್‌ ಕುಟುಂಬದ ಒಳಗಡೆ ವಿವಾದ ಹುಟ್ಟಿದ್ದರಿಂದಲೇ ಕವಿತಾ ಅವರು ಈ ಪತ್ರ ಬರೆದಿದ್ದಾರೆ’ ಎಂದು ಬಿಜೆ‍ಪಿ ಶಾಸಕಾಂಗ ಪಕ್ಷದ ನಾಯಕ ಎ.ಮಹೇಶ್ವರ್‌ ರೆಡ್ಡಿ ಹೇಳಿಕೆ ನೀಡಿದ್ದಾರೆ.

‘ಕೆಸಿಆರ್‌ ಅವರು ಅಲ್ಪಸಂಖ್ಯಾತರು ಹಾಗೂ ಉರ್ದುಭಾಷೆಯನ್ನು ನಿರಾಕರಿಸಿದ್ದನ್ನು ಉಲ್ಲೇಖಿಸಿಯೇ ಕವಿತಾ ಅವರು ಈ ಪತ್ರ ಬರೆದಿದ್ದಾರೆ’ ಎಂದು ಕಾಂಗ್ರೆಸ್‌ ಶಾಸಕ ಬೀರ್ಲಾ ಇಲಯ್ಯಾ ಯಾದವ್‌ ತಿರುಗೇಟು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.