ಹೈದರಾಬಾದ್: ತಮ್ಮ ಸೋದರಸಂಬಂಧಿ ಮತ್ತು ಪಕ್ಷದ ಮಾಜಿ ನಾಯಕಿ ಕೆ. ಕವಿತಾ ಅವರು ಮಾಡಿರುವ ಆರೋಪಗಳನ್ನು ಆಕೆಯ ವಿವೇಚನೆಗೆ ಬಿಡುವುದಾಗಿ ಬಿಆರ್‌ಎಸ್ ಶಾಸಕ ಟಿ.ಹರೀಶ್ ರಾವ್ ಅವರು ಶನಿವಾರ ಹೇಳಿದ್ದಾರೆ.
ವಿದೇಶ ಪ್ರವಾಸದಿಂದ ಹಿಂದಿರುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 25 ವರ್ಷಗಳ ನನ್ನ ರಾಜಕೀಯ ಜೀವನ ತೆರೆದ ಪುಸ್ತಕದಂತಿದೆ. ಕೆಲ ಸಮಯದಿಂದ ಕೆಲವು ರಾಜಕೀಯ ಪಕ್ಷಗಳು ನನ್ನ ವಿರುದ್ಧ ಮಾಡುತ್ತಿರುವ ಆರೋಪಗಳ್ಳನ್ನೇ ಅವಳು(ಕವಿತಾ) ಮಾಡಿದ್ದಾಳೆ. ಏಕೆ ಈ ಆರೋಪಗಳನ್ನು ಅವಳು ಮಾಡಿದಳು? ಅದನ್ನು ನಾನು ಆಕೆಯ ವಿವೇಚನೆಗೆ ಬಿಡುತ್ತೇನೆ’ ಎಂದು ಹೇಳಿದ್ದಾರೆ.
‘ತೆಲಂಗಾಣ ರಾಜ್ಯ ಸ್ಥಾಪನೆಯಲ್ಲಿ ಮತ್ತು ರಾಜ್ಯ ರಚನೆಯಾದ ನಂತರ ಅದರ ಅಭಿವೃದ್ಧಿಯಲ್ಲಿ ನನ್ನ ಪಾತ್ರ ಮತ್ತು ಸಮರ್ಪಣೆ ಎಲ್ಲರಿಗೂ ತಿಳಿದಿದೆ’ ಎಂದಿದ್ದಾರೆ.
‘ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಮತ್ತು ಜನರ ಸಮಸ್ಯೆಗಳನ್ನು ಪರಿಹರಿಸಲು ಇತರ ಬಿಆರ್‌ಎಸ್ ನಾಯಕರೊಂದಿಗೆ ಸಾಮೂಹಿಕ ಪ್ರಯತ್ನಗಳನ್ನು ಮಾಡುವುದಾಗಿ’ ಅವರು ಹೇಳಿದ್ದಾರೆ.
ಕಾಲೇಶ್ವರಂ ಯೋಜನೆಯ ವಿಚಾರದಲ್ಲಿ ಹರೀಶ್ ರಾವ್ ಮತ್ತು ಮತ್ತೊಬ್ಬ ಸೋದರ ಸಂಬಂಧಿ ಜೆ. ಸಂತೋಷ್ ಕುಮಾರ್ ಅವರು ತಮ್ಮ ತಂದೆ ಕೆಸಿಆರ್ ಅವರ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ ಎಂದು ಕವಿತಾ ಆರೋಪಿಸಿದ್ದರು.
ಅಲ್ಲದೇ, ನಮ್ಮ ಕುಟುಂಬದ ವಿರುದ್ಧ ಹರೀಶ್ ರಾವ್ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇದಾದ ಬೆನ್ನಲ್ಲೇ, ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಕವಿತಾ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು.
ಸೆಪ್ಟೆಂಬರ್ 2ರಂದು ಕವಿತಾ ಅವರು ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.