ADVERTISEMENT

ಮುಖ್ಯಮಂತ್ರಿ ಪರಿಹಾರ ನಿಧಿಗೆ ನೆರವು ಕೋರಿದ ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 10:34 IST
Last Updated 9 ಆಗಸ್ಟ್ 2019, 10:34 IST
   

ಬಾಗಲಕೋಟೆ: ಜಿಲ್ಲೆಯಲ್ಲಿ ಇದುವರೆಗೆ 63 ಗ್ರಾಮಗಳು ಪ್ರವಾಹ ಪೀಡಿತವಾಗಿದ್ದು, ಇಲ್ಲಿನ 6381 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ.

ಮುಧೋಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತ್ರಸ್ತರ ನೆರವಿಗಾಗಿ 42 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ11,970 ಜನರಿಗೆ ಆಶ್ರಯ ಕಲ್ಪಿಸಲಾಗಿದೆ. ಪ್ರವಾಹ ಪೀಡಿತರ ಆರೋಗ್ಯದ ಹಿತದೃಷ್ಟಿಯಿಂದ 92 ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ. ಈಗಾಗಲೆ 19,366 ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆಸ್ಥಳಾಂತರಿಸಲಾಗಿದ್ದು, ಮೇವಿನ ವ್ಯವಸ್ಥೆ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಅಂದಾಜು 10 ಸಾವಿರ ಹೆಕ್ಟೆರ್‌ ಜಮೀನು ಮುಳುಗಡೆಯಾಗಿದೆ. ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುಳುಗಡೆ ಪ್ರಮಾಣವೂ ಹೆಚ್ಚಬಹುದು. ಸದ್ಯ ಜಿಲ್ಲೆಯಲ್ಲಿ ಪರಿಹಾರ ಕಾರ್ಯಾಕ್ಕಾಗಿ 10 ಕೋಟಿ ರೂಪಾಯಿಯನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಮನೆಗಳನ್ನು ಕಳೆದುಕೊಂಡಿರುವವರಿಗೆ ಮನೆಗಳನ್ನು ನಿರ್ಮಿಸಿಕೊಡುವ ಕಾರ್ಯ ಆಗಬೇಕಿದೆ. ಕೇಂದ್ರ ಸರ್ಕಾರದೊಂದಿಗೆ ನಿರಂತರವಾಗಿ ಸಂಪರ್ಕಲ್ಲಿದ್ದೇನೆ. ರಾಜ್ಯದಲ್ಲಿರುವಂತಹ ಎಲ್ಲ ಪ್ರತಿಷ್ಠಿತ ಕೈಗಾರಿಕೆಗಳು ಹಾಗೂ ಉಳಿದವರು(ದಾನಿಗಳು) ಮುಖ್ಯಮಂತ್ರಿ ಪರಿಹಾರ ನಿಧಿಗೆ ದೊಡ್ಡ ಪ್ರಮಾಣದಲ್ಲಿ ನೆರವು ನೀಡಬೇಕು ಎಂದು ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.