ನವದೆಹಲಿ: ದೆಹಲಿಯ ಮಳಿಗೆಯೊಂದರಲ್ಲಿ ಆಭರಣ ದರೋಡೆ ಮಾಡಿದ ಆರೋಪದಡಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರೊಬ್ಬರನ್ನು ಬಂಧಿಸಲಾಗಿದೆ.
22 ವರ್ಷದ ಗೌರವ್ ಯಾದವ್ ಬಂಧಿತ ಯೋಧ. ಕಳೆದ ತಿಂಗಳಷ್ಟೆ ಇವರು ಬಿಎಸ್‌ಎಫ್‌ಗೆ ನಿಯೋಜನೆಗೊಂಡಿದ್ದರು. ಪಂಜಾಬ್‌ನ ಫಾಜಿಲ್ಕಾದಲ್ಲಿ ಯಾದವ್ ಅವರನ್ನು ಬಿಎಸ್ಎಫ್ ಕರ್ತವ್ಯಕ್ಕೆ ನಿಯೋಜಿಸಿತ್ತು.
ಆನ್‌ಲೈನ್ ಜೂಜಾಟದಲ್ಲಿ ಹಣ ಕಳೆದುಕೊಂಡಿದ್ದ ಗೌರವ್, ಅಪರಾಧಕ್ಕೆ ಸಂಬಂಧಿಸಿದ ಟಿ.ವಿ ಕಾರ್ಯಕ್ರಮಗಳ ವೀಕ್ಷಣೆಯಿಂದ ಪ್ರೇರಿತರಾಗಿ ಆಟಿಕೆ ಬಂದೂಕು ತೋರಿಸಿ ಮಳಿಗೆಯಿಂದ ಆಭರಣ ದೋಚಿದ್ದಾರೆ ಎಂದು ಪೊಲೀಸರು ಬುಧವಾರ ಮಾಹಿತಿ ನೀಡಿದರು.
ದರೋಡೆ ಮಾಡುವ ಹಿಂದಿನ ದಿನ (ಜೂನ್ 18) ರಜೆ ತೆಗೆದುಕೊಂಡಿದ್ದ ಗೌರವ್ ಪಂಜಾಬ್‌ನಿಂದ ದೆಹಲಿಗೆ ತೆರಳಿದರು. ಜೂನ್ 19ರಂದು ನಗರದ ಫಾರ್ಶ್ ಬಜಾರ್‌ನಲ್ಲಿರುವ ಆಭರಣ ಮಳಿಗೆಗೆ ನುಗ್ಗಿದ ಗೌರವ್, ಕೈಯಲ್ಲಿದ್ದ ಬಂದೂಕು ತೋರಿಸಿ ನಾಲ್ಕು ಚಿನ್ನದ ಬ್ರೇಸ್ಲೆಟ್‌ಗಳನ್ನು ದೋಚಿ ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಬಳಿಕ ಗೌರವ್ ಸಿಕ್ಕಿಬಿದ್ದಿದ್ದು, ತಪ್ಪೊಪ್ಪಿಕೊಂಡಿದ್ದಾರೆ.
ಎರಡು ಬ್ರೇಸ್ಲೆಟ್‌ಗಳನ್ನು ಮಾರಿ ₹2 ಲಕ್ಷ ಹಣ ಪಡೆದುಕೊಂಡಿದ್ದ ಗೌರವ್ ಅವರಿಂದ 2 ಬ್ರೆಸ್ಲೇಟ್ ಹಾಗೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.