ADVERTISEMENT

ಬಿಎಸ್‌ಎಫ್ | ಕೇಂದ್ರ ಕಚೇರಿಯ ಎರಡು ಮಹಡಿಗೆ ಬೀಗ

​ಪ್ರಜಾವಾಣಿ ವಾರ್ತೆ
Published 4 ಮೇ 2020, 20:00 IST
Last Updated 4 ಮೇ 2020, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೆಹಲಿಯಲ್ಲಿರುವ ಬಿಎಸ್‌ಎಫ್‌ನ ಕೇಂದ್ರ ಕಚೇರಿಯ ಹೆಡ್‌ಕಾನ್‌ಸ್ಟೆಬಲ್‌ ಒಬ್ಬರಿಗೆ ಕೋವಿಡ್‌–19 ದೃಢಪಟ್ಟ ಹಿನ್ನೆಲೆಯಲ್ಲಿ ಕಚೇರಿಯ ಎರಡು ಮಹಡಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು. ಸೋಂಕಿತನಜೊತೆ ಸಂಪರ್ಕದಲ್ಲಿದ್ದ ಎಲ್ಲರನ್ನೂ ಕ್ವಾರಂಟೈನ್‌ ಮಾಡಲಾಗಿದೆ.

ಲೋಧಿ ರಸ್ತೆಯಲ್ಲಿರುವ ಸಿಜಿಒ ಕಾಂಪ್ಲೆಕ್ಸ್‌ನಲ್ಲಿ ಬಿಎಸ್‌ಎಫ್‌ನ ಎಂಟು ಮಹಡಿಯ ಕಚೇರಿ ಇದ್ದು, ಇದೇ ಆವರಣದಲ್ಲಿ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌)ಕೇಂದ್ರ ಕಚೇರಿಯೂ ಇದೆ. ಸಿಆರ್‌ಪಿಎಫ್‌ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ಸಿಬ್ಬಂದಿಯಲ್ಲೂ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಭಾನುವಾರವೇ ಸಿಆರ್‌ಪಿಎಫ್‌ ಕೇಂದ್ರ ಕಚೇರಿ ಮುಚ್ಚಲಾಗಿತ್ತು.

ಬಿಎಸ್‌ಎಫ್‌ನ 50 ಸಿಬ್ಬಂದಿಗೆ ಕ್ವಾರಂಟೈನ್‌:ಪಶ್ಚಿಮ ಬಂಗಾಳಕ್ಕೆ ಕೇಂದ್ರ ಸರ್ಕಾರ ನಿಯೋಜಿಸಿರುವ ಅಂತರ್‌ ಸಚಿವಾಲಯದ ಕೇಂದ್ರ ತಂಡದಲ್ಲಿದ್ದ (ಐಎಂಸಿಟಿ) ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಸಿಬ್ಬಂದಿಯೊಬ್ಬರಲ್ಲಿ ಕೋವಿಡ್‌ ದೃಢಪಟ್ಟಿದೆ. ಹೀಗಾಗಿ ತಂಡದಲ್ಲಿದ್ದ 50 ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ.

ADVERTISEMENT

ಸಶಸ್ತ್ರ ಸೀಮಾ ದಳದ 13 ಸಿಬ್ಬಂದಿಗೆ ಸೋಂಕು:ನೇಪಾಳ ಹಾಗೂ ಭೂತಾನ್‌ ಗಡಿ ಭದ್ರತೆಯ ಹೊಣೆ ಹೊತ್ತಿರುವ ಸಶಸ್ತ್ರ ಸೀಮಾ ದಳದ 13 ಸಿಬ್ಬಂದಿಯಲ್ಲಿ ಕೋವಿಡ್‌ ಸೋಂಕು ಇರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪೈಕಿ 9 ಸಿಬ್ಬಂದಿ ದೆಹಲಿಯ 25ನೇ ಬೆಟಾಲಿಯನ್‌ನವರಾಗಿದ್ದಾರೆ. ಸೋಂಕಿತರೆಲ್ಲರೂ ಆಸ್ಪತ್ರೆಯಲ್ಲಿನ ಪ್ರತ್ಯೇಕ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.