ADVERTISEMENT

ಬಿಎಸ್‌ಎನ್‌ಎಲ್‌ ಮುಚ್ಚಲ್ಲ: ಸಚಿವ ಸಂಪುಟ ಸಭೆ ಬಳಿಕ ರವಿಶಂಕರ್ ಪ್ರಸಾದ್ ಹೇಳಿಕೆ

ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ * ಬಿಎಸ್‌ಎನ್‌ಎಲ್‌–ಎಂಟಿಎನ್‌ಎಲ್ ವಿಲೀನ ಶೀಘ್ರ

ಪಿಟಿಐ
Published 23 ಅಕ್ಟೋಬರ್ 2019, 19:38 IST
Last Updated 23 ಅಕ್ಟೋಬರ್ 2019, 19:38 IST
ರವಿಶಂಕರ್ ಪ್ರಸಾದ್
ರವಿಶಂಕರ್ ಪ್ರಸಾದ್   

ನವದೆಹಲಿ:ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಬಿಎಸ್‌ಎನ್‌ಎಲ್‌ ಅನ್ನು ಮುಚ್ಚುವುದಿಲ್ಲ. ಬದಲಿಗೆ, ಅದರ ಪುನಶ್ಚೇತನಕ್ಕೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರತೆಗೆದುಕೊಳ್ಳಲಾಗಿದೆ. ಸಭೆಯ ನಂತರ ನಡೆದ ಮಾಧ್ಯಮಗೋಷ್ಠಿಯಲ್ಲಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಈ ಮಾಹಿತಿ ನೀಡಿದ್ದಾರೆ.

‘ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ಗಳು ದೇಶದ ಮಹತ್ವದ ಸ್ವತ್ತುಗಳಾಗಿವೆ. ಭಾರತೀಯ ಸೇನೆಯ ಮೂರೂ ಪಡೆಗಳ ದೂರಸಂಪರ್ಕ ವ್ಯವಸ್ಥೆಯನ್ನು ಬಿಎಸ್‌ಎನ್‌ಎಲ್‌ ನಿರ್ವಹಿಸುತ್ತಿದೆ. ಹೀಗಾಗಿ ಈ ಸಂಸ್ಥೆಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ. ಇದರಲ್ಲಿ ಸರ್ಕಾರದ ನಿರ್ಧಾರ ಸ್ಪಷ್ಟವಾಗಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ನಷ್ಟದಲ್ಲಿರುವ ಈ ಸಂಸ್ಥೆಗಳನ್ನು ಮತ್ತೆ ಲಾಭದತ್ತ ಕೊಂಡೊಯ್ಯಲು ಪುನಶ್ಚೇತನಕ್ಕೆ ಹಲವು ಯೋಜನೆಗಳನ್ನು ಸಿದ್ಧಪಡಿಸಲಾಗಿದೆ. ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ಗಳನ್ನು ವಿಲೀನ ಮಾಡಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಬಿಎಸ್‌ಎನ್‌ಎಲ್‌ನ ಆದಾಯದ ಶೇ 85ರಷ್ಟು ಮೊತ್ತವು, ಅವುಗಳ ನೌಕರರ ವೆಚ್ಚಕ್ಕೆ ವಿನಿಯೋಗವಾಗುತ್ತಿದೆ. ಇದನ್ನು ಶೇ 25ಕ್ಕೆ ಇಳಿಸಲುನಿರ್ಧರಿಸಲಾಗಿದೆ. ಇದಕ್ಕಾಗಿ ನೌಕರರ ಸ್ವಯಂ ನಿವೃತ್ತಿ (ವಿಆರ್‌ಎಸ್‌) ಯೋಜನೆಯನ್ನು ರೂಪಿಸಲಾಗಿದೆ. ಶೇ 50ರಷ್ಟು ನೌಕರರು ವಿಆರ್‌ಎಸ್‌ ಯೋಜನೆಗೆ ಅರ್ಹರಾಗಲಿದ್ದಾರೆ ಎಂದು ಸಂಸ್ಥೆ ಹೇಳಿದೆ.

* ತೈಲ ಉದ್ಯಮದಲ್ಲಿ ಇಲ್ಲದ ಕಂಪನಿಗಳು ಪೆಟ್ರೋಲ್‌ ಬಂಕ್‌ಗಳನ್ನು ನಡೆಸಲು ಒಪ್ಪಿಗೆ

* ಕೇಂದ್ರ ಸರ್ಕಾರದ ‘ಎ’ ಮತ್ತು ‘ಬಿ’ ವರ್ಗದ ನೌಕರರು, ಸರ್ಕಾರದ ಅನುಮತಿ ಇಲ್ಲದೆ ಪಡೆಯಬಹುದಾಗಿದ್ದ ಉಡುಗೊರೆಯ ಮೌಲ್ಯದ ಮಿತಿಯನ್ನು ₹ 1,500ರಿಂದ ₹ 5,000ಕ್ಕೆ ಏರಿಕೆ ಮಾಡಲಾಗಿದೆ. ‘ಸಿ’ ವರ್ಗದ ನೌಕರರಿಗೆ ಈ ಮಿತಿಯನ್ನು ₹ 500ರಿಂದ ₹ 2,000ಕ್ಕೆ ಏರಿಸಲಾಗಿದೆ

ಪುನಶ್ಚೇತನಕ್ಕೆ ಸಾವಿರಾರು ಕೋಟಿ ಪ್ಯಾಕೇಜ್‌

₹ 15,000 ಕೋಟಿ ಸರ್ಕಾರಿ ಬಾಂಡ್‌ ಮೂಲಕ ಸಂಗ್ರಹಿಸಲಿರುವ ಮೊತ್ತ

₹ 20,140 ಕೋಟಿ 4ಜಿ ತರಂಗಾಂತರ ಹಂಚಿಕೆಗೆ ವೆಚ್ಚ ಮಾಡಲಿರುವ ಮೊತ್ತ

₹ 3,674 ಕೋಟಿ 4ಜಿ ತರಂಗಾಂತರಗಳ ಮೇಲಿನ ಜಿಎಸ್‌ಟಿಗೆ ಬೇಕಾಗಲಿರುವ ಮೊತ್ತ

₹ 29,937 ಕೋಟಿ ನೌಕಕರ ಸ್ವಯಂ ನಿವೃತ್ತಿ ಯೋಜನೆಗೆ ಮೀಸಲಿರಿಸಲಿರುವ ಮೊತ್ತ

₹ 68,751 ಕೋಟಿ ಬಿಎಸ್‌ಎನ್‌ಎಲ್‌–ಎಂಟಿಎನ್‌ಎಲ್‌ ಪುನಶ್ಚೇತನ ಪ್ಯಾಕೇಜ್‌ನ ಮೊತ್ತ

₹ 38,000 ಕೋಟಿ ಬಿಎಸ್‌ಎನ್‌ಎಲ್‌–ಎಂಟಿಎನ್‌ಎಲ್‌ ಸ್ವತ್ತುಗಳ ಬಳಕೆ ಮೂಲಕ ಸಂಗ್ರಹಿಸಲು ಉದ್ದೇಶಿಸಿರುವ ಮೊತ್ತ.ಸಂಸ್ಥೆಯ ಸ್ವತ್ತುಗಳನ್ನು ಬಾಡಿಗೆಗೆ ಮತ್ತು ಭೋಗ್ಯಕ್ಕೆ ನೀಡುವ ಮೂಲಕ ಈ ಮೊತ್ತವನ್ನು ಸಂಗ್ರಹಿಸಲಾಗುತ್ತದೆ

ಸ್ವಯಂ ನಿವೃತ್ತಿಗೆ ಎರಡು ಯೋಜನೆ

ಬಿಎಸ್‌ಎನ್‌ಎಲ್‌ನಲ್ಲಿ 1.67 ಲಕ್ಷ ಮತ್ತು ಎಂಟಿಎನ್‌ಎಲ್‌ನಲ್ಲಿ 22,000 ನೌಕರರು ಇದ್ದಾರೆ.ನೌಕರರ ಸ್ವಯಂ ನಿವೃತ್ತಿ (ವಿಆರ್‌ಎಸ್‌) ₹ 29,937 ಕೋಟಿ ಒದಗಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಎರಡು ಯೋಜನೆಗಳನ್ನು ಸರ್ಕಾರ ರೂಪಿಸಿದೆ.

125 % ವೇತನ ಪರಿಹಾರ

* ಐವತ್ತಮೂರುವರೆ ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ ನೌಕರರು ಈ ಯೋಜನೆ ಅಡಿ ಬರಲಿದ್ದಾರೆ

* ಉಳಿಕೆ ಸೇವಾವಧಿಯಲ್ಲಿ ಅವರು ಪಡೆಯಲಿದ್ದ ವೇತನಕ್ಕಿಂತ ಹೆಚ್ಚು ಪರಿಹಾರ ಪಡೆಯಲಿದ್ದಾರೆ

80–100 % ವೇತನ ಪರಿಹಾರ

* ಐವತ್ತರಿಂದ ಐವತ್ತಮೂರುವರೆ ವರ್ಷದ ವಯಸ್ಸಿನ ನೌಕರರು ಈ ಯೋಜನೆ ಅಡಿ ಬರಲಿದ್ದಾರೆ

* ಉಳಿಕೆ ಸೇವಾವಧಿಯಲ್ಲಿ ಅವರು ಪಡೆಯಲಿದ್ದ ವೇತನಕ್ಕಿಂತ ಹೆಚ್ಚು ಪರಿಹಾರ ಪಡೆಯಲಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.