ಉದಿತ್ ರಾಜ್
ನವದೆಹಲಿ: ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ನಾಯಕಿ ಮಾಯಾವತಿ ಅವರು ತಮ್ಮ ಸೋದರ ಸಂಬಂಧಿ ಆಕಾಶ್ ಆನಂದ್ ಅವರನ್ನು ಪಕ್ಷದಿಂದ ಹೊರಹಾಕಿರುವುದನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ಉದಿತ್ ರಾಜ್, ಬಿಎಸ್‌ಪಿಯನ್ನು ಬಿಜೆಪಿ ನಿಯಂತ್ರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಎಸ್‌ಪಿಯ ಆರಂಭ ಇತರ ಪಕ್ಷಗಳಿಗಿಂತ ಭಿನ್ನವಾಗಿದೆ. ಏಕೆಂದರೆ, ಅದು ಸಾಮಾಜಿಕ ಚಳವಳಿಯೊಂದಿಗೆ ಪ್ರಾರಂಭವಾಯಿತು. ನಂತರ ರಾಜಕೀಯ ಪಕ್ಷವಾಯಿತು. ಆದರೆ, ಈಗ ಬಿಜೆಪಿ ಅದನ್ನು ಬಳಸಿಕೊಳ್ಳುತ್ತಿದೆ. ಆಕಾಶ್ ಆನಂದ್ ಅವರನ್ನು ಎರಡು ಬಾರಿ ಪಕ್ಷದ ರಾಷ್ಟ್ರೀಯ ಸಂಚಾಲಕನ ಹುದ್ದೆಯಿಂದ ವಜಾಗೊಳಿಸಿರುವುದು ಬಿಎಸ್‌ಪಿಯನ್ನು ಬಿಜೆಪಿ ನಿಯಂತ್ರಿಸುತ್ತಿದೆ ಎಂದು ತೋರಿಸುತ್ತದೆ’ ಎಂದು ಹೇಳಿದ್ದಾರೆ.
‘ಒತ್ತಡವಿಲ್ಲದಿದ್ದರೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಇಂತಹ ಹೆಜ್ಜೆ ಇಡುತ್ತಿರಲಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್–ಎಸ್‌ಪಿ ಜೊತೆ ಮೈತ್ರಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನಾವು ಶೂನ್ಯವಾಗಿಯೇ ಉಳಿಯುತ್ತೇವೆ ಎಂದು ಆಕಾಶ್ ಆನಂದ್ ಹೇಳಿದ್ದರು. ಇದು ಬಿಜೆಪಿಯನ್ನು ಆಂತರಿಕವಾಗಿ ತೊಂದರೆಗೊಳಿಸಿದೆ’ ಎಂದು ಅವರು ತಿಳಿಸಿದ್ದಾರೆ.
2022ರ ಉತ್ತರ ಪ್ರದೇಶ ಚುನಾವಣೆಯ ಸಮಯದಲ್ಲಿ, ಬಿಜೆಪಿ ಗೆದ್ದರೂ ಸಮಾಜವಾದಿ ಪಕ್ಷ ಗೆಲ್ಲಬಾರದು ಎಂದು ಮಾಯಾವತಿ ಹೇಳಿದ್ದು ನಿಜವಲ್ಲವೇ?. ಬಿಜೆಪಿ ಗೆಲ್ಲುವಂತೆ ಮಾಡಬೇಕೆಂದು ಅವರು ನೇರವಾಗಿ ಸೂಚಿಸಿದ್ದರು. ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ, ಬಿಎಸ್‌ಪಿ ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿದ್ದರೆ, ಬಿಜೆಪಿ ಕೇಂದ್ರದಲ್ಲಿ ಸರ್ಕಾರ ರಚಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ನಿಜವಲ್ಲವೇ ಎಂದು ರಾಜ್ ಪ್ರಶ್ನಿಸಿದ್ದಾರೆ.
ಮಾರ್ಚ್ 2ರಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ನಾಯಕಿ ಮಾಯಾವತಿ ಅವರು ತಮ್ಮ ಸೋದರ ಸಂಬಂಧಿ ಆಕಾಶ್ ಆನಂದ್ ಅವರನ್ನು ಪಕ್ಷದ ರಾಷ್ಟ್ರೀಯ ಸಂಚಾಲಕ ಹುದ್ದೆಯಿಂದ ವಜಾಗೊಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.