ADVERTISEMENT

ವಿಚಾರಣೆ ಪುನಾರಂಭಕ್ಕೆ ‘ಸುಪ್ರೀಂ’ ಪರಿಶೀಲನೆ

ಬೆನ್ನಿಗಾನಹಳ್ಳಿ ಅಕ್ರಮ ಡಿನೋಟಿಫಿಕೇಷನ್‌: ಬಿ.ಎಸ್‌. ಯಡಿಯೂರಪ್ಪ, ಡಿ.ಕೆ. ಶಿವಕುಮಾರ್‌ ವಿರುದ್ಧದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 26 ಜುಲೈ 2019, 19:59 IST
Last Updated 26 ಜುಲೈ 2019, 19:59 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ನವದೆಹಲಿ: ಅಕ್ರಮ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ಎಸ್. ಯಡಿಯೂರಪ್ಪ ಹಾಗೂ ಡಿ.ಕೆ.ಶಿವಕುಮಾರ್ ವಿರುದ್ಧದ ಅಪರಾಧ ಪ್ರಕರಣದ ವಿಚಾರಣೆ ಪುನಾರಂಭ ಕುರಿತು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದೆ.

‘ಈಗಾಗಲೇ ಇತ್ಯರ್ಥಗೊಂಡಿರುವ ಪ್ರಕರಣವನ್ನು ಮರು ವಿಚಾರಣೆಗೆ ಒಳಪಡಿಸುವುದು ಸೂಕ್ತವಲ್ಲ. ಅಲ್ಲದೆ, ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸುವವರು ಮಾಡುತ್ತಿರುವ ಆರೋಪಗಳ ಪ್ರಸ್ತುತತೆ ಏನು’ ಎಂದು ಇಬ್ಬರೂ ಮುಖಂಡರ ಪರ ವಕೀಲರಾದ ಅಭಿಷೇಕ್‌ ಮನು ಸಿಂಘ್ವಿ ಹಾಗೂ ಮುಕುಲ್‌ ರೋಹಟ್ಗಿ ನ್ಯಾಯಪೀಠವನ್ನು ಪ್ರಶ್ನಿಸಿದರು.

ಆದರೆ, ‘ಪ್ರಕರಣವನ್ನು ಕೈಬಿಟ್ಟಿದ್ದಾದರೂ ಹೇಗೆ’ ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಹಾಗೂ ಎಂ.ಆರ್. ಶಾ ಅವರನ್ನು ಒಳಗೊಂಡ ಪೀಠ ಪ್ರಕರಣದ ಮರು ವಿಚಾರಣೆಗೆ ಅಗತ್ಯ ಪರಿಶೀಲನೆ ನಡೆಸುವುದಾಗಿ ತಿಳಿಸಿತು.

ADVERTISEMENT

‘ಭ್ರಷ್ಟಾಚಾರದ ಪ್ರಕರಣದಲ್ಲಿ ಯಾವುದೇ ವ್ಯಕ್ತಿ ಮಧ್ಯ ಪ್ರವೇಶಿಸಬಹುದು. ಇದೇ ರೀತಿ 2016ರಲ್ಲೂ ಲೋಕಾಯುಕ್ತಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನಾವು ಮಧ್ಯ ಪ್ರವೇಶ ಮಾಡಿದ್ದೆವು’ ಎಂದು ಅರ್ಜಿ ಸಲ್ಲಿಸಿರುವ ಸಮಾಜ ಪರಿವರ್ತನ ಸಮುದಾಯದ ಎಸ್‌.ಆರ್‌. ಹಿರೇಮಠ ಪರ ವಕೀಲ ಪ್ರಶಾಂತ್‌ ಭೂಷಣ್‌ ತಿಳಿಸಿದರು.

ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ಮೇಲ್ಮನವಿಯನ್ನು ಹಿಂದಕ್ಕೆ ಪಡೆಯಲಾಗಿದೆ. ಮರು ವಿಚಾರಣೆ ಕೋರಿ ಮಧ್ಯ ಪ್ರವೇಶಿಸಿರುವ ವ್ಯಕ್ತಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಯಡಿಯೂರಪ್ಪ ಪರ ವಕೀಲ ರೋಹಟ್ಗಿ ಹೇಳಿದರು.

‘ಇದೊಂದು ಖಾಸಗಿ ದೂರು. ಹೈಕೋರ್ಟ್‌ ಇದನ್ನು ವಜಾಗೊಳಿಸಿದೆ. ಆದರೂ ನೋಟಿಸ್ ನೀಡದೆ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವುದು ಎಷ್ಟು ಸೂಕ್ತ’ ಎಂದು ಡಿ.ಕೆ. ಶಿವಕುಮಾರ್‌ ಪರ ವಕೀಲ ಸಿಂಘ್ವಿ ಪ್ರಶ್ನಿಸಿದರು.

ಆದರೆ, ಪ್ರಕರಣದಲ್ಲಿ ಪ್ರಮುಖ ಅಂಶಗಳು ಅಡಕಗೊಂಡಿರುವುದರಿಂದ ಮರು ವಿಚಾರಣೆ ನಡೆಸಬಹುದೇ ಎಂಬ ಅಂಶಗಳನ್ನು ಅವಲೋಕಿಸಿದ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ನ್ಯಾಯಪೀಠ ತಿಳಿಸಿತು.

ಪ್ರಕರಣದ ವಿವರ: ಬೆಂಗಳೂರು ಬಳಿಯ ಬೆನ್ನಿಗಾನಹಳ್ಳಿಯಲ್ಲಿ ಬಿ.ಕೆ. ಶ್ರೀನಿವಾಸನ್‌ ಎಂಬುವವರು 1962ರಲ್ಲಿ ಖರೀದಿಸಿದ್ದ 5.11 ಎಕರೆ ಭೂಮಿಯ ಪೈಕಿ 4.20 ಎಕರೆ ಕೃಷಿ ಭೂಮಿಯನ್ನು ಕೈಗಾರಿಕೆ ಉದ್ದೇಶಕ್ಕೆ ಪರಿವರ್ತಿಸಲಾಗಿತ್ತು. ನಂತರ ಇದೇ ಭೂಮಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಾಯ್ದೆ ಅಡಿ ಸ್ವಾಧೀನಪಡಿಸಿಕೊಳ್ಳಲು ನೋಟಿಫೈ ಮಾಡಲಾಗಿತ್ತು.

ಆದರೆ, 2003ರಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರು ನೋಟಿಫೈ ಮಾಡಿರುವ ವಿಷಯ ಗೊತ್ತಿದ್ದೂ ಶ್ರೀನಿವಾಸನ್‌ ಅವರಿಂದ ಈ ಭೂಮಿಯನ್ನು ₹1.62 ಕೋಟಿ ನೀಡಿ ಖರೀದಿಸಿದ್ದರು. 2010ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಅವರು ₹ 29 ಕೋಟಿ ಮೌಲ್ಯದ ಭೂಮಿಯನ್ನು ವಸತಿ ಸಮುಚ್ಚಯ ನಿರ್ಮಿಸುವ ಉದ್ದೇಶಕ್ಕೆ ಡಿನೋಟಿಫೈ ಮಾಡಿದ್ದರು.

ಅಕ್ರಮವಾಗಿ ಡಿ-ನೋಟಿಫಿಕೇಷನ್ ಮಾಡಲಾಗಿದೆ ಎಂಬ ಮಹಾ ಲೇಖಪಾಲ (ಸಿಎಜಿ)ರ ವರದಿಯನ್ನು ಆಧರಿಸಿ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಆದರೆ, 2015ರ ಡಿಸೆಂಬರ್‌ 18ರಂದು ರಾಜ್ಯ ಹೈಕೋರ್ಟ್‌ ‌ ಎಫ್‌ಐಆರ್‌ ರದ್ದುಪಡಿಸಿ, ಈ ಇಬ್ಬರೂ ಮುಖಂಡರ ವಿರುದ್ಧದ ಪ್ರಕರಣವನ್ನು ಕೈಬಿಟ್ಟಿತ್ತು.

ಈ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ಅರ್ಜಿಯನ್ನು ರಾಮನಗರದ ಸಾಮಾಜಿಕ ಕಾರ್ಯಕರ್ತ ಕಬ್ಬಾಳೆಗೌಡ ಅವರು ಹಿಂದಕ್ಕೆ ಪಡೆದ ಕಾರಣ ಕಳೆದ ಫೆಬ್ರುವರಿ 21ರಂದು ಸುಪ್ರೀಂ ಕೋರ್ಟ್‌ ಪ್ರಕರಣವನ್ನು ವಜಾಗೊಳಿಸಿತ್ತು.

ಮೂಲ ಅರ್ಜಿದಾರರು ರಾಜಿ ಆಗುವ ಮೂಲಕ ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದಾರೆ. ಜೊತೆಗೆ ಆರೋಪಿಯು ಕಾನೂನಿನ ದುರ್ಬಳಕೆ ಮಾಡಿಕೊಂಡಿರುವ ಸಾಧ್ಯತೆ ಇದೆ. ದೂರುದಾರರು ರಾಜಿ ಆಗಿರಬಹುದು. ದೂರು ಹಾಗೇ ಇದೆ. ಹಾಗಾಗಿ ಈ ಪ್ರಕರಣದ ವಿಚಾರಣೆಯನ್ನು ಪುನಾರಂಭಿಸಬೇಕು ಎಂದು ಕಳೆದ ಮೇ ತಿಂಗಳಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.