ADVERTISEMENT

ರಾಮ ಜನ್ಮಭೂಮಿ ಹಕ್ಕು ಪ್ರತಿಪಾದಿಸಿ ಅಯೋಧ್ಯೆಯಲ್ಲಿ ಬೌದ್ಧ ಬಿಕ್ಕುಗಳಿಂದ ಧರಣಿ

ಪಿಟಿಐ
Published 15 ಜುಲೈ 2020, 6:01 IST
Last Updated 15 ಜುಲೈ 2020, 6:01 IST
ಅಯೋಧ್ಯೆಯ ರಾಮ ಜನ್ಮಭೂಮಿ ನ್ಯಾಸ ಕಾರ್ಯಕ್ಷೇತ್ರದಲ್ಲಿ ಕಲ್ಲುಗಳನ್ನು ಶುಚಿಗೊಳಿಸುತ್ತಿರುವ ಕೆಲಸಗಾರರು
ಅಯೋಧ್ಯೆಯ ರಾಮ ಜನ್ಮಭೂಮಿ ನ್ಯಾಸ ಕಾರ್ಯಕ್ಷೇತ್ರದಲ್ಲಿ ಕಲ್ಲುಗಳನ್ನು ಶುಚಿಗೊಳಿಸುತ್ತಿರುವ ಕೆಲಸಗಾರರು   

ಅಯೋಧ್ಯೆ: ಇಲ್ಲಿನ ರಾಮ ಜನ್ಮಭೂಮಿ ಪ್ರದೇಶವು ಬೌದ್ಧರ ಸ್ಥಳವಾಗಿತ್ತು ಎಂದು ಬೌದ್ಧ ಬಿಕ್ಕುಗಳು ಪ್ರತಿಪಾದಿಸಿದ್ದಾರೆ. ರಾಮ ಜನ್ಮಭೂಮಿ ಸ್ಥಳದಲ್ಲಿ ಯುನೆಸ್ಕೊದಿಂದ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ಉತ್ಖನನ ನಡೆಯಬೇಕು ಎಂದು ಆಗ್ರಹಿಸಿ ಮಂಗಳವಾರ ಉಪವಾಸ ಮತ್ತು ಧರಣಿ ನಡೆಸಿದ್ದಾರೆ.

ಅಯೋಧ್ಯೆಯ ಜಿಲ್ಲಾ ಮ್ಯಾಜಿಸ್ಟ್ರೇಟರ ಕಚೇರಿ ಹೊರಗೆ ಧರಣಿ ನಡೆಸಿದ ಬಿಕ್ಕುಗಳು, ಈ ಹಿಂದೆ ಜನ್ಮಭೂಮಿಯಲ್ಲಿ ನಡೆಸಿದ ಉತ್ಖನನದ ವೇಳೆ ದೊರತಿರುವ ವಸ್ತುಗಳನ್ನು ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕಾಗಿ ಸ್ಥಳವನ್ನು ಸಮತಟ್ಟು ಮಾಡುವ ವೇಳೆ ಮೇ ತಿಂಗಳಲ್ಲಿ ಒಂದು ಶಿವಲಿಂಗ, ಏಳು ಕಪ್ಪು ಕಲ್ಲುಗಂಬಗಳು, ಆರು ಕೆಂಪು ಕಲ್ಲುಗಂಬಗಳು, ನಾಲ್ಕು ದೇವ–ದೇವತೆಯರ ಮುರಿದ ವಿಗ್ರಹಗಳು ದೊರೆತಿವೆ ಎಂದು ಮಂದಿರ ನಿರ್ಮಾಣ ಉಸ್ತುವಾರಿ ವಹಿಸಿಕೊಂಡಿರುವ ಟ್ರಸ್ಟ್ ಹೇಳಿತ್ತು.

ADVERTISEMENT

ರಾಮ ಜನ್ಮಭೂಮಿ ಪ್ರದೇಶದಲ್ಲಿ ದೊರೆತ ವಸ್ತುಗಳು ಬೌದ್ಧ ಸಂಸ್ಕೃತಿಗೆ ಸೇರಿದ್ದು. ಹೀಗಾಗಿ ಅಲ್ಲಿ ಯುನೆಸ್ಕೊದಿಂದಲೇ ಉತ್ಖನನ ನಡೆಯಬೇಕು. ತಕ್ಷಣವೇ ರಾಮ ಮಂದಿರ ನಿರ್ಮಾಣ ಕಾರ್ಯಸ್ಥಗಿತಗೊಳಿಸಬೇಕು ಎಂದು ಬಿಕ್ಕುಗಳು ಆಗ್ರಹಿಸಿದ್ದಾರೆ.

ಅಯೋಧ್ಯೆಯೇ ಪುರಾತನ ಸಾಕೇತ ನಗರವಾಗಿದ್ದು, ಬೌದ್ಧ ಧರ್ಮದ ಕೇಂದ್ರವಾಗಿತ್ತು ಎಂಬುದು ಬೌದ್ಧ ಧರ್ಮದ ಅನುಯಾಯಿಗಳ ನಂಬಿಕೆಯಾಗಿದೆ.

‘ರಾಮ ಜನ್ಮಭೂಮಿಗೆ ಸಂಬಂಧಿಸಿದ ನಮ್ಮ ಜ್ಞಾಪಕ ಪತ್ರಗಳನ್ನು ಅಯೋಧ್ಯೆಯ ಆಡಳಿತದ ಮೂಲಕ ರಾಷ್ಟ್ರಪತಿ, ಮುಖ್ಯ ನ್ಯಾಯಮೂರ್ತಿಗಳು ಮತ್ತು ಇತರ ಸರ್ಕಾರಿ ಸಂಸ್ಥೆಗಳಿಗೆ ಕಳುಹಿಸಿದ್ದೇವೆ’ ಎಂದು ಆಜಾದ್ ಬೌದ್ಧ ಧರ್ಮ ಸೇನಾದ ಸದಸ್ಯರು ತಿಳಿಸಿದ್ದಾರೆ.

‘ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಇನ್ನು ಒಂದು ತಿಂಗಳ ಒಳಗೆ ಸ್ಥಗಿತಗೊಳಿಸಿ ಆ ಪ್ರದೇಶದ ಉತ್ಖನನಕ್ಕೆ ಯುನೆಸ್ಕೊಗೆ ಅವಕಾಶ ಮಾಡಿಕೊಡದಿದ್ದರೆ ನಾವು ಮತ್ತೆ ಹೋರಾಟ ಆರಂಭಿಸಲಿದ್ದೇವೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.