ADVERTISEMENT

ಕರ್ನಾಟಕ ಮೂಲದ ‘ಶೂನ್ಯ ಬಂಡವಾಳ ಕೃಷಿ’ ಪ್ರತಿಪಾದಿಸಿದ ನಿರ್ಮಲಾ ಸೀತಾರಾಮನ್‌

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 12:45 IST
Last Updated 5 ಜುಲೈ 2019, 12:45 IST
   

ನವದೆಹಲಿ: ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಶೂನ್ಯ ಬಂಡವಾಳ ಕೃಷಿಯ ಅಗತ್ಯವನ್ನು ಪ್ರತಿಪಾದಿಸಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಕೃಷಿ ಕ್ಷೇತ್ರದ ಉದ್ಯಮಿಗಳ ಬೆಂಬಲಕ್ಕೂ ನಿಲ್ಲುವುದಾಗಿ ತಿಳಿಸಿದ್ದಾರೆ.

‘ಸುಲಭ ಉದ್ದಿಮೆ ಮತ್ತು ಸುಲಭ ಜೀವನ’ವನ್ನು ಎಲ್ಲ ರೈತರಿಗೂ ಒದಗಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು. ಅಲ್ಲದೆ, ಶೂನ್ಯ ಬಂಡವಾಳ ಕೃಷಿ ಸೂತ್ರವನ್ನು ಪ್ರತಿಪಾದಿಸಿದ ಅವರು, ಈ ಸೂತ್ರವು ಕೃಷಿಯನ್ನು ಸುಸ್ಥಿರ ಮತ್ತು ಅದರ ಆದಾಯವನ್ನು ದ್ವಿಗುಣಗೊಳಿಸುತ್ತದೆ ಎಂದು ಹೇಳಿದರು.

ಸಾವಯವ ಪದ್ಧತಿಯ ಮೇಲೆ ಅವಲಂಬಿತವಾದ, ರಾಸಾಯನಿಕಗಳಿಂದ ಮುಕ್ತವಾದ ಸಹಜ ಕೃಷಿಯು ಸುಸ್ಥಿರವಾಗಿದ್ದು, ಅಧಿಕ ಬಂಡವಾಳದಿಂದ ಹೊರತಾಗಿರುತ್ತದೆ. ಇದಕ್ಕೆ ಸರ್ಕಾರ ಪ್ರೋತ್ಸಾಹ ನೀಡುತ್ತದೆ ಎಂದು ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ADVERTISEMENT

ಶೂನ್ಯ ಬಂಡವಾಳ ಕೃಷಿಯು ಅಪ್ಪಟ ಕರ್ನಾಟಕದ ಪರಿಕಲ್ಪನೆ. ರೈತ ಚಳವಳಿಯ ದಿನಗಳಲ್ಲಿ ಈ ಪರಿಕಲ್ಪನೆ ರಾಜ್ಯದಲ್ಲಿ ಉದಯಿಸಿತ್ತು. ಕೃಷಿ ತಜ್ಞ ಸುಭಾಷ್‌ ಪಾಲೇಕರ್‌ ಮತ್ತು ರಾಜ್ಯ ರೈತ ಸಂಘದ ಸಹಯೋಗದೊಂದಿಗೆ ಈ ಪರಿಕಲ್ಪನೆಯನ್ನು ರಾಜ್ಯದಲ್ಲಿ ಹೆಚ್ಚು ಪ್ರಚುರಪಡಿಸಲಾಗಿತ್ತು. ಸಾವಯವ ಮಾದರಿಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಈ ಪ್ರಯೋಗ ಕರ್ನಾಟಕದಲ್ಲಿ ಯಶಸ್ವಿಯಾಗುತ್ತಲೇ ದೇಶದ ಹಲವು ರಾಜ್ಯಗಳಲ್ಲಿ ಈ ಪದ್ಧತಿಯನ್ನು ಅನುಸರಿಸಲಾಯಿತು. ಸದ್ಯ ಕೇಂದ್ರ ಸರ್ಕಾರವೇ ಈ ಪದ್ಧತಿಗೆ ಪ್ರೋತ್ಸಾಹ ನೀಡಲು ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.