ADVERTISEMENT

ಆರೋಗ್ಯ ಕಾರ್ಯಕರ್ತರ ರಕ್ಷಣೆಗೆ ಕಠಿಣ ಕಾನೂನು ತನ್ನಿ: ಶಶಿ ತರೂರ್‌ ಆಗ್ರಹ

ಈಗ ಚಾಲ್ತಿಯಲ್ಲಿರುವ ಕಾನೂನು ದುರ್ಬಲವಾಗಿದೆ ಎಂದ ಕಾಂಗ್ರೆಸ್‌ ನಾಯಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಫೆಬ್ರುವರಿ 2023, 10:59 IST
Last Updated 13 ಫೆಬ್ರುವರಿ 2023, 10:59 IST
   

ನವದೆಹಲಿ: ಆರೋಗ್ಯ ಕಾರ್ಯಕರ್ತರ ಮೇಲೆ ನಡೆಯುವ ಹಲ್ಲೆಯನ್ನು ತಡೆಯಲು ಸಮಗ್ರ ಕಾನೂನು ತರಬೇಕು ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು ಲೋಕಸಭೆಯಲ್ಲಿ ಆಗ್ರಹಿಸಿದರು.

‘ಶೇ 75 ರಷ್ಟು ವೈದ್ಯರು ಒಂದಲ್ಲ ಒಂದು ರೀತಿಯಲ್ಲಿ ದೈಹಿಕ ದಾಳಿ ಎದುರಿಸಿದ್ದಾರೆ. ಇವುಗಳನ್ನು ನಿಯಂತ್ರಿಸಲು ಸದ್ಯ ಇರುವ ಕಾನೂನುಗಳು ದುರ್ಬಲವಾಗಿದೆ‘ ಎಂದು ಅವರು ಹೇಳಿದರು.

ಆರೋಗ್ಯ ಕಾರ್ಯಕರ್ತರ ವಿರುದ್ಧ ಹಲ್ಲೆ ತಡೆಯಲು 2019ರಲ್ಲಿ ಕಾನೂನು ತರಲಾಗಿತ್ತು, ಬಳಿಕ ಅದನ್ನು ಹಿಂಪಡೆಯಲಾಗಿತ್ತು. ಈಗ ಕಠಿಣ ಕಾನೂನು ಜಾರಿಗೆ ತರುವ ಅವಶ್ಯಕತೆ ಇದೆ ಎಂದು ಅವರು ಪ್ರತಿಪಾದಿಸಿದರು.

ADVERTISEMENT

ಇನ್ನು ಬೆಂಗಳೂರು ಹಾಗೂ ಕೋಯಿಕ್ಕೋಡ್‌ ನಡುವೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಳವಾಗಿದ್ದು, ಹೀಗಾಗಿ ಪಾಲಕ್ಕಾಡ್‌– ಶೊರ್ನೂರ್‌ ಮಾರ್ಗವಾಗಿ ವಂದೇ ಭಾರತ್‌ ರೈಲು ಸೇವೆ ಆರಂಭಿಸಬೇಕು ಎಂದು ಕಾಂಗ್ರೆಸ್‌ ಸದಸ್ಯ ವಿ.ಕೆ ಶ್ರೀಕಂಠನ್‌ ಆಗ್ರಹಿಸಿದರು.

ಜಾರ್ಖಂಡ್‌ನ ಗೊಡ್ಡಾದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಗೆ ತರಬೇಕು ಎಂದು ಬಿಜೆಪಿಯ ಸದಸ್ಯ ನಿಶಿಕಾಂತ್‌ ದುಬೆ ಆಗ್ರಹಿಸಿದರು. ಈ ಪ್ರದೇಶದಲ್ಲಿ ಸಂತಾಲ್‌ ಸಮುದಾಯಕ್ಕೆ ಸೇರಿದ ಜನರ ಸಂಖ್ಯೆ ಇಳಿಕೆಯಾಗುತ್ತಿದ್ದು, ಬಾಂ‌ಗ್ಲಾದೇಶಿ ವಲಸಿಗರ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.