ADVERTISEMENT

ಬುಲ್ಲಿ ಬಾಯ್ ಮಾಸ್ಟರ್ ಮೈಂಡ್ ಶ್ವೇತಾ ಸಿಂಗ್ ಬಗ್ಗೆ ಹೊರ ಬಂತು ಕುತೂಹಲಕರ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜನವರಿ 2022, 8:23 IST
Last Updated 5 ಜನವರಿ 2022, 8:23 IST
ಬುಲ್ಲಿ ಬಾಯ್ ಆ್ಯಪ್
ಬುಲ್ಲಿ ಬಾಯ್ ಆ್ಯಪ್   

ಮುಂಬೈ: 'ಬುಲ್ಲಿ ಬಾಯ್' ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಾಖಂಡದಲ್ಲಿ ಮುಂಬೈ ಪೊಲೀಸರು ಬಂಧಿಸಿರುವ ಶ್ವೇತಾ ಸಿಂಗ್ ಎಂಬ ಯುವತಿ ಬಗ್ಗೆ ಕುತೂಹಲಕರ ಮಾಹಿತಿಗಳು ಹೊರ ಬೀಳುತ್ತಿವೆ.

ಬುಲ್ಲಿ ಬಾಯ್‌ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾದ ಶ್ವೇತಾ ಸಿಂಗ್ ಓರ್ವ ವಿದ್ಯಾರ್ಥಿನಿಯಾಗಿದ್ದು, ಇತ್ತೀಚೆಗಷ್ಟೇ ಪಿಯುಸಿ ಮುಗಿಸಿ ಎಂಜಿನಿಯರಿಂಗ್ ಪ್ರವೇಶಕ್ಕಾಗಿ ತಯಾರಿ ನಡೆಸುತ್ತಿದ್ದರು ಎನ್ನಲಾಗಿದೆ.

ಶ್ವೇತಾ ಸಿಂಗ್ ಕುಟುಂಬ ಉತ್ತರ ಪ್ರದೇಶದಿಂದ ವಲಸೆ ಹೋಗಿ ಉತ್ತರಾಖಂಡದಲ್ಲಿ ನೆಲೆಸಿತ್ತು. ಶ್ವೇತಾ ಸಿಂಗ್ ತಂದೆ ಕಳೆದ ವರ್ಷ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರು. ಇತ್ತೀಚೆಗಷ್ಟೇ ಅವರ ತಾಯಿಯೂ ಕ್ಯಾನ್ಸ್‌ರ್‌ಗೆ ತುತ್ತಾಗಿ ಮೃತಪಟ್ಟಿದ್ದರಂತೆ.

ADVERTISEMENT

ಮೂವರು ಸಹೋದರಿಯರು ಹಾಗೂ ಒಬ್ಬ ಸಹೋದರನನ್ನು ಹೊಂದಿರುವ ಶ್ವೇತಾ ಸಿಂಗ್ ಟ್ವಿಟರ್‌ನಲ್ಲಿ JattKhalsa07 ಎಂಬನಕಲಿ ಖಾತೆ ತೆರೆದು ಬುಲ್ಲಿ ಬಾಯ್‌ ಆ್ಯಪ್‌ಗೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಾಕುತ್ತಿದ್ದರು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

18 ವರ್ಷದ ಈ ಯುವತಿಯನ್ನು ಉತ್ತರಾಖಂಡದಿಂದ ಪೊಲೀಸರು ಬಂಧಿಸಿ ಮುಂಬೈಗೆ ಕರೆ ತಂದಿದ್ದು, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಇದೇ ಪ್ರಕರಣದಲ್ಲಿ ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಬೆಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿ ವಿಶಾಲ್ ಕುಮಾರ್‌ಗೆ ಹಾಗೂ ಬಂಧಿತ ಯುವತಿಗೆ ನಿಕಟ ಸಂಪರ್ಕ ಇತ್ತು ಎನ್ನಲಾಗಿದೆ.

ಪಶ್ಚಿಮ ಮುಂಬೈನ ಸೈಬರ್ ಪೊಲೀಸ್ ಠಾಣೆಯು ‘ಬುಲ್ಲಿ ಬಾಯ್’ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದವರು ಮತ್ತು ಈ ಆ್ಯಪ್‌ ಅನ್ನು ಪ್ರಚಾರ ಮಾಡಿದ ಟ್ವಿಟರ್ ಬಳಕೆದಾರರ ವಿರುದ್ಧ ಪ್ರಕರಣ ದಾಖಲಿಸಿದೆ.

ಏನಿದು ಪ್ರಕರಣ?

‘ಬುಲ್ಲಿ ಬಾಯ್’ಆ್ಯಪ್‌ಗೆ 100ಕ್ಕೂ ಹೆಚ್ಚು ಪ್ರಭಾವಿ ಮುಸ್ಲಿಂ ಮಹಿಳೆಯರ ಭಾವಚಿತ್ರಗಳನ್ನು ಅಪ್‌ಲೋಡ್‌ ಮಾಡಿ ಇವರನ್ನು ಹರಾಜಿಗಿಡಲಾಗಿದೆ ಎಂಬ ಒಕ್ಕಣೆಯೊಂದಿಗೆ ಅವಹೇಳನ ಮಾಡಿರುವುದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ಈ ಸಂಬಂಧ ಪತ್ರಕರ್ತೆಯೊಬ್ಬರು ನೀಡಿರುವ ದೂರಿನ ಆಧಾರದಲ್ಲಿ ದೆಹಲಿ ಪೊಲೀಸರು ಭಾನುವಾರ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಪ್ರಕರಣ ಕುರಿತು ಮುಂಬೈನ ಸೈಬರ್‌ ಕ್ರೈಂ ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದಾರೆ. ಬಳಿಕ ಈ ಆ್ಯಪ್‌ ಅನ್ನು ನಿರ್ಬಂಧಿಸಲಾಗಿದೆ.

‘ಬುಲ್ಲಿ ಬಾಯ್’ಆ್ಯಪ್‌ ಅನ್ನು ನಿರ್ಬಂಧಿಸಿರುವುದಾಗಿ ಗಿಟ್‌ಹಬ್‌ ವೇದಿಕೆಯು ದೃಢಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.