ADVERTISEMENT

ಜೈಪುರ | ಬಸ್‌ನಲ್ಲಿ ‘ಗೂಳಿ ಕಾಳಗ’ ಜೋರು: ಚಾಲಕ, ಪ್ರಯಾಣಿಕರು ಪಾರು

ಪಿಟಿಐ
Published 11 ಫೆಬ್ರುವರಿ 2025, 12:43 IST
Last Updated 11 ಫೆಬ್ರುವರಿ 2025, 12:43 IST
   

ಜೈಪುರ: ನಡುರಸ್ತೆಯಲ್ಲಿ ಎರಡು ಗೂಳಿಗಳು ಪರಸ್ಪರ ಕಾಳಗ ನಡೆಸಿದ್ದು, ಈ ಪೈಕಿ ಒಂದು ಗೂಳಿಯು ನಿಲುಗಡೆ ಮಾಡಿದ್ದ ಸಾರಿಗೆ ಬಸ್‌ನೊಳಗೆ ನುಗ್ಗಿ ‘ದಾಂದಲೆ’ ನಡೆಸಿದ ಘಟನೆ ಜೈಪುರ ನಗರದ ಹರ್ಮದಾ ವಲಯದಲ್ಲಿ ನಡೆದಿದೆ.

ಗೂಳಿಯು ಏಕಾಏಕಿ ಬಸ್‌ಗೆ ನುಗ್ಗಿದ್ದೇ ಆತಂಕಗೊಂಡ ಪ್ರಯಾಣಿಕರು ತುರ್ತು ಬಾಗಿಲ ಮೂಲಕ ಹೊರಗೆ ಜಿಗಿದಿದ್ದಾರೆ. ನಿರ್ವಾಹಕ ಮತ್ತು ಚಾಲಕ ಇಬ್ಬರೂ ನಿರ್ಗಮಿಸುವ ಬಾಗಿಲಿನಿಂದಲೇ ಹೊರಗೆ ಜಿಗಿದಿದ್ದಾರೆ.

ಒಂದು ಗೂಳಿ ಬಸ್‌ನ ಒಳಗೆ ನುಗ್ಗಿದ್ದರೆ ಅದರ ಜೊತೆಗೆ ಕಾಳಗಕ್ಕಿಳಿದಿದ್ದ, ಕೋಪೋದ್ರಿಕ್ತವಾಗಿದ್ದ ಮತ್ತೊಂದು ಗೂಳಿ ಬಾಗಿಲಿಗೆ ಅಡ್ಡಲಾಗಿ ನಿಂತಿತ್ತು. ಒಳಗೆ ನುಗ್ಗಿದ್ದ ಗೂಳಿ ಸೀಟುಗಳನ್ನು ಜಖಂಗೊಳಿಸಿ, ಕಿಟಕಿ ಗಾಜುಗಳನ್ನು ಪುಡಿಗಟ್ಟಿತು. 

ADVERTISEMENT

ಸುಮಾರು 30 ನಿಮಿಷ ಆತಂಕ, ಗೊಂದಲದ ಸನ್ನಿವೇಶ ಇತ್ತು. ಬಳಿಕ ಸಾರ್ವಜನಿಕರು ಗೂಳಿಯೊಂದನ್ನು ಓಡಿಸಿದ್ದು, ಬಸ್‌ನ ಒಳಗೆ ಹೊಕ್ಕಿದ್ದ ಮತ್ತೊಂದು ಹೊರಬರುವಂತೆ ಕ್ರಮವಹಿಸಿದರು.

‘ಈ ಗೊಂದಲದಲ್ಲಿ ಯಾವುದೇ ಪ್ರಯಾಣಿಕರಿಗೆ ಪೆಟ್ಟಾಗಿಲ್ಲ’ ಎಂದು ಜೈಪುರ ನಗರ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.