ಸುಪ್ರೀಂ ಕೋರ್ಟ್
ನವದೆಹಲಿ: ಮಹಾರಾಷ್ಟ್ರದ ಗ್ರಾಮವೊಂದರ ಸರಪಂಚ ಸ್ಥಾನಕ್ಕೆ ಮಹಿಳೆಯೊಬ್ಬರನ್ನು ಸುಪ್ರೀಂ ಕೋರ್ಟ್ ಪುನಃ ನೇಮಕ ಮಾಡಿದ್ದು, ತಳಮಟ್ಟದಲ್ಲಿ ಪ್ರಜಾತಂತ್ರದ ಪ್ರಗತಿಗೆ ಅಡ್ಡಿಯಾಗಲು ಅಧಿಕಾರಿಗಳಿಗೆ ಅವಕಾಶ ಕೊಡಲಾಗದು ಎಂದು ಸ್ಪಷ್ಟಪಡಿಸಿದೆ.
ಮಹಾರಾಷ್ಟ್ರದಲ್ಲಿ ಪಂಚಾಯತ್‌ನ ಚುನಾಯಿತ ಪ್ರತಿನಿಧಿಗಳ ಜೊತೆ ಅಧಿಕಾರಿಗಳು ಅನುಚಿತವಾಗಿ ವರ್ತಿಸಿದ ಹಲವು ನಿದರ್ಶನಗಳು ತನ್ನ ಗಮನಕ್ಕೆ ಬಂದಿವೆ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್. ಕೋಟೀಶ್ವರ ಸಿಂಗ್ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.
‘ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳ ಜೊತೆ ತಪ್ಪಾಗಿ ನಡೆದುಕೊಂಡ ಎರಡು–ಮೂರು ಪ್ರಕರಣಗಳಲ್ಲಿ ನಾವು ತೀರ್ಪು ಕೊಟ್ಟಿದ್ದೇವೆ. ಇದು ಮಹಾರಾಷ್ಟ್ರದಲ್ಲಿ ಆಗುತ್ತಿದೆ. ಈ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳ ಅಧೀನದಲ್ಲಿ ಇರಬೇಕು. ತಳಮಟ್ಟದಲ್ಲಿ ಪ್ರಜಾತಂತ್ರದ ಬೆಳವಣಿಗೆಗೆ ಅಡ್ಡಿಪಡಿಸಲು ಈ ಅಧಿಕಾರಿಗಳಿಗೆ ಅವಕಾಶ ಮಾಡಿಕೊಡಲಾಗದು’ ಎಂದು ಪೀಠವು ಹೇಳಿದೆ.
ಚುನಾಯಿತ ಪ್ರತಿನಿಧಿಗಳನ್ನು ಅನರ್ಹಗೊಳಿಸಲು ಅಧಿಕಾರಿಗಳು ಹಳೆಯ ಪ್ರಕರಣಗಳಿಗೆ ಜೀವ ನೀಡಿದ ನಿದರ್ಶನಗಳನ್ನು ಪೀಠವು ಗಮನಿಸಿದೆ. ‘ನಿಮ್ಮ ಅಜ್ಜ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುವ ಕಾರಣಕ್ಕೆ ನಿಮ್ಮನ್ನು ಅನರ್ಹಗೊಳಿಸಲಾಗುತ್ತಿದೆ ಎಂದು ಇವರು ಹೇಳುತ್ತಾರೆ’ ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದರು.
ಕಲಾವತಿ ರಾಜೇಂದ್ರ ಕೋಕಲೆ ಎನ್ನುವವರನ್ನು ರೋಹಾ ತಾಲ್ಲೂಕಿನ ಗ್ರಾಮವೊಂದರ ಸರಪಂಚ ಆಗಿ ಸುಪ್ರೀಂ ಕೋರ್ಟ ಮರುನೇಮಕ ಮಾಡಿದೆ. ರಾಯಗಢ ಜಿಲ್ಲಾಧಿಕಾರಿಯು ಕೋಕಲೆ ಅವರು ಹೊಂದಿದ್ದ ಸ್ಥಾನ ತೆರವಾಗಿದೆ ಎಂದು 2024ರ ಜೂನ್ 7ರಂದು ಆದೇಶಿಸಿದ್ದರು. ಈ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿತ್ತು. ಹೈಕೋರ್ಟ್ ನಿಲುವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಕೋಕಲೆ ಅವರು ಸರಪಂಚ ಸ್ಥಾನಕ್ಕೆ ಸಲ್ಲಿಸಿದ್ದ ರಾಜೀನಾಮೆಯನ್ನು ಹಿಂಪಡೆದಿದ್ದರೂ, ಅವರು ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.
ಆದರೆ, ಕೋಕಲೆ ಅವರ ರಾಜೀನಾಮೆಯು ಜಾರಿಗೆ ಬಂದಿರಲಿಲ್ಲ ಎಂದು ಹೈಕೋರ್ಟ್ ಹೇಳಿತ್ತು. ‘ರಾಜೀನಾಮೆಯನ್ನು ಹಿಂಪಡೆದಿರುವುದನ್ನು ಪರಿಗಣಿಸದೆ ಜಿಲ್ಲಾಧಿಕಾರಿಯು ಸರಪಂಚ ಹುದ್ದೆ ಖಾಲಿಯಾಗಿದೆ ಎಂದು ತಪ್ಪಾಗಿ ನಿರ್ಣಯಿಸಿದ್ದರು’ ಎಂದು ಹೈಕೋರ್ಟ್ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.