ADVERTISEMENT

ನನ್ನ ಮಗನನ್ನು ಸುಟ್ಟು ಬಿಡಿ: ಪಶುವೈದ್ಯೆ ಅತ್ಯಾಚಾರ ಆರೋಪಿ ತಾಯಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 6:11 IST
Last Updated 2 ಡಿಸೆಂಬರ್ 2019, 6:11 IST
ಅತ್ಯಾಚಾರ ಆರೋಪಿಗಳ ವಿರುದ್ಧ ಮಹಿಳೆಯರ ಮೌನ ಪ್ರತಿಭಟನೆ
ಅತ್ಯಾಚಾರ ಆರೋಪಿಗಳ ವಿರುದ್ಧ ಮಹಿಳೆಯರ ಮೌನ ಪ್ರತಿಭಟನೆ   

ಹೈದರಾಬಾದ್: ದೇಶಾದ್ಯಂತ ತಲ್ಲಣ ಸೃಷ್ಟಿಸಿರುವ ಪಶುವೈದ್ಯೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ. ‘ತಪ್ಪು ಮಾಡಿದ್ದರೆ ನಮ್ಮ ಮಕ್ಕಳನ್ನು ಶಿಕ್ಷಿಸಿ’ ಎಂದು ಆರೋಪಿಗಳ ಪೋಷಕರು ಆಕ್ರೋಶಕ್ಕೆ ದನಿ ಜೋಡಿಸಿದ್ದಾರೆ.

ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ಕನೇ ಆರೋಪಿ ಚೆನ್ನಕೇಶವಲು ತಾಯಿ ಜಯಮ್ಮ, ‘ನನ್ನ ಮಗ ಈ ಕೃತ್ಯ ಎಸಗಿದ್ದಾನೆ ಎಂದಾದರೆ ಅವನನ್ನು ಸುಟ್ಟು ಬಿಡಿ. ತಪ್ಪು ಯಾರೇ ಮಾಡಿದರೂ ತಪ್ಪೇ. ಮಗಳು ಹೀಗೆ ಮೃತಪಟ್ಟರೆ ತಾಯಿಯ ಸ್ಥಿತಿ ಹೇಗಿರುತ್ತದೆ ಎನ್ನುವುದು ನನಗೆ ತಿಳಿಯುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಆರೋಪಿ ಅರೀಫ್ ನನ್ನ ಮಗನನ್ನು ಕರೆದುಕೊಂಡು ಹೋಗಲು ಮಂಗಳವಾರ ಬೆಳಿಗ್ಗೆ ಮನೆಗೆ ಬಂದಿದ್ದ. ಚೆನ್ನಕೇಶವಲು ಬುಧವಾರ ವಾಪಸ್‌ ಬರಬೇಕಿತ್ತು. ಆದರೆ, ಬರಲಿಲ್ಲ. ಕಿಡ್ನಿ ಸಮಸ್ಯೆಯಿಂದಾಗಿ ಆರು ತಿಂಗಳಿಂದ ನನ್ನ ಮಗ ಕೆಲಸ ಮಾಡುತ್ತಿರಲಿಲ್ಲ,’ ಎಂದು ವಿವರಿಸಿದರು

‘ನನ್ನ ಮಗ ಈ ರೀತಿ ಮಾಡುತ್ತಾನೆ ಎಂದರೆ, ನಂಬಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಆತನೂ ಇದರಲ್ಲಿ ಭಾಗಿಯಾಗಿದ್ದರೆ ಬೇರೆ ಆರೋಪಿಗಳಂತೆ ಅವನಿಗೂ ಶಿಕ್ಷೆಯಾಗಬೇಕು. ನನಗೂ ಒಬ್ಬಳು ಮಗಳಿದ್ದಾಳೆ. ಸಂತ್ರಸ್ತೆಯ ತಾಯಿಗೆ ಆಗುತ್ತಿರುವ ನೋವು ನನಗೆ ಅರ್ಥವಾಗುತ್ತದೆ’ ಎಂದು ಮರುಗಿದರು.

ಆರೋಪಿ ಮೊಹಮ್ಮದ್ ಅರೀಫ್, ತಂದೆ ಹುಸೇನ್‌, ‘ನನ್ನ ಮಗ ಈ ಕೃತ್ಯ ನಡೆಸಿರುವುದು ನಿಜವಾದರೆಅವನಿಗೆ ಶಿಕ್ಷೆ ಆಗಲೇಬೇಕು’ ಎಂದರು. ಘಟನೆ ಕುರಿತಂತೆ ಆಘಾತ ವ್ಯಕ್ತಪಡಿಸಿದ ಆತನ ತಾಯಿ ಮೊಲಾನ್‌ಬಿ, ‘ನನ್ನ ಮಗ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವುದು ಸತ್ಯವೇ ಆಗಿದ್ದರೆ ಆತನನ್ನು ಕೊಂದು ಹಾಕಿ’ ಎಂದರು.

‘ಘಟನೆ ನಡೆದ ದಿನ ರಾತ್ರಿ 12ಕ್ಕೆ ಮನೆಗೆ ಬಂದ ನನ್ನ ಮಗ,ತಾನು ಮಾಡಿದಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾಗಿ ಹೇಳಿದನು. ನಂತರ ಊಟ ಮಾಡುವೆಯಾ ಎಂದು ಕೇಳಿದೆ. ಬೇಡ ಎಂದು ಹೋಗಿ ಮಲಗಿದನು. ರಾತ್ರಿ 3 ಗಂಟೆಗೆ ಸುಮಾರಿಗೆ ಪೊಲೀಸರು ಬಂದು ಅವನನ್ನು ಕರೆದೊಯ್ದರು,’ ಎಂದು ಹೇಳಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.