ಮೊದಲ ಬಾರಿ ಬಂದ ಬಸ್ ಅನ್ನು ಸ್ವಾಗತಿಸಿದ ಗ್ರಾಮಸ್ಥರು
ಚಿತ್ರ ಕೃಪೆ: SP_GADCHIROLI
ಗಡ್ಚಿರೋಲಿ: ಒಂದು ಕಾಲದಲ್ಲಿ ನಕ್ಸಲ್ ಪೀಡಿತ ಪ್ರದೇಶವಾಗಿದ್ದ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಮಾರ್ಕನಾರ್ ಎಂಬ ಹಳ್ಳಿಗೆ ಸರ್ಕಾರಿ ಬಸ್ ಸಂಚಾರ ಆರಂಭಿಸಿದೆ.
ಸ್ವಾತಂತ್ರ್ಯದ ಬಳಿಕ ಇದೇ ಮೊದಲ ಬಾರಿಗೆ ಮಾರ್ಕನಾರ್ ಹಳ್ಳಿಗೆ ಬಸ್ ಸಂಚಾರ ಆರಂಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲ ಬಾರಿ ಬಸ್ ಹಳ್ಳಿಯನ್ನು ಪ್ರವೇಶಿಸುತ್ತಿದ್ದಂತೆ ಸ್ಥಳೀಯರು ಅದನ್ನು ಸ್ವಾಗತಿಸಿ ರಾಷ್ಟ್ರಧ್ವಜ ಬೀಸುವ ಮೂಲಕ ಹರ್ಷೋದ್ಗಾರ ವ್ಯಕ್ತಪಡಿಸಿದರು.
ಬಸ್ ಸೌಲಭ್ಯದಿಂದ ವಿದ್ಯಾರ್ಥಿಗಳು, ಸುತ್ತಮುತ್ತಲಿನ ಹಳ್ಳಿಗಳ ಸುಮಾರು 1,200 ಜನರು ಸದುಪಯೋಗ ಪಡೆದುಕೊಳ್ಳಲಿದ್ದಾರೆ. ಅತಿ ಹೆಚ್ಚು ಬುಡಕಟ್ಟು ಜನಸಂಖ್ಯೆ ಹೊಂದಿರುವ ಮತ್ತು ನಕ್ಸಲ್ ಪೀಡಿತ ಪ್ರದೇಶವೆಂದೇ ಹೆಸರಾಗಿದ್ದ ಗಡ್ಚಿರೋಲಿ ಜಿಲ್ಲೆ, ದೀರ್ಘಕಾಲದವರೆಗೆ ಮೂಲಭೂತ ಸೌಲಭ್ಯದ ಕೊರತೆ ಅನುಭವಿಸುತ್ತಿತ್ತು.
ಕಳೆದ ಐದು ವರ್ಷಗಳಲ್ಲಿ, ಜಿಲ್ಲೆಯಲ್ಲಿ 420.95 ಕಿಲೋಮೀಟರ್ ಉದ್ದದ 20 ರಸ್ತೆಗಳು ಮತ್ತು 60 ಸೇತುವೆಗಳನ್ನು ನಿರ್ಮಿಸಲಾಗಿದ್ದು, ಗಡ್ಚಿರೋಲಿ ಪೊಲೀಸರ ಕಣ್ಗಾವಲಿನಲ್ಲಿ ಅವುಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.