ADVERTISEMENT

ಪೆಗಾಸಸ್ ಖರೀದಿದಾರ ಖಂಡಿತವಾಗಿಯೂ ಭಾರತ ಸರ್ಕಾರವೇ: ಚಿದಂಬರಂ ಹೇಳಿಕೆ

ಪಿಟಿಐ
Published 29 ಅಕ್ಟೋಬರ್ 2021, 8:44 IST
Last Updated 29 ಅಕ್ಟೋಬರ್ 2021, 8:44 IST
ಚಿದಂಬರಂ
ಚಿದಂಬರಂ   

ನವದೆಹಲಿ: ಇಸ್ರೇಲ್‌ನ ಎನ್‌ಎಸ್‌ಒ ನಂತಹ ಸಂಸ್ಥೆಗಳು ಸರ್ಕಾರೇತರ ಸಂಸ್ಥೆಗಳಿಗೆ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ದೇಶ ಅನುಮತಿ ನೀಡುವುದಿಲ್ಲ ಎಂದು ಇಸ್ರೇಲ್‌ ರಾಯಭಾರಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಹಿರಿಯ ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ, ಪೆಗಾಸಸ್‌ ಬೇಹುಗಾರಿಕೆ ಪ್ರಕರಣದ ವಿಷಯದಲ್ಲಿ ಕೇಂದ್ರ ಸರ್ಕಾರದ ಮೇಲೆ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.

‘ಭಾರತದ ಸಂದರ್ಭದಲ್ಲಿ ಅದರ ಖರೀದಿದಾರ ಖಂಡಿತವಾಗಿಯೂ ಭಾರತ ಸರ್ಕಾರವೇ ಆಗಿದೆ’ ಎಂದು ಅವರು ಆರೋಪಿಸಿದ್ದಾರೆ.

‘ಪೆಗಾಸಸ್ ಕುತಂತ್ರಾಂಶದ ಬೇಹುಗಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಬುದ್ಧಿವಂತ ಮತ್ತು ದಿಟ್ಟ ಆದೇಶ ನೀಡಿದೆ. ಇದರ ಬೆನ್ನಲ್ಲೇ ವಿವಾದದ ಒಂದೊಂದೇ ವಾಸ್ತವಾಂಶಗಳು ಹೊರಬರುತ್ತಿವೆ. ಗುರುವಾರವಷ್ಟೇ ಇಸ್ರೇಲ್‌ನ ರಾಯಭಾರಿ ಪೆಗಾಸಸ್ ಕುತಂತ್ರಾಂಶವನ್ನು ಸರ್ಕಾರಕ್ಕೆ ಮಾತ್ರ ಮಾರಾಟ ಮಾಡಲಾಗುತ್ತದೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಆದ್ದರಿಂದ, ಭಾರತದ ಸಂದರ್ಭದಲ್ಲಿ, ಖರೀದಿದಾರರು ಖಂಡಿತವಾಗಿಯೂ ಭಾರತ ಸರ್ಕಾರವೇ ಆಗಿದೆ’ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.

ADVERTISEMENT

ಭಾರತ ಸರ್ಕಾರವೇ ಪೆಗಾಸಸ್‌ನ ಖರೀದಿದಾರ ಎಂಬುದನ್ನು ದೂರಸಂಪರ್ಕ ಸಚಿವರು ಒಪ್ಪಿಕೊಳ್ಳುತ್ತಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ‘ಈಗಲೂ ನೀವು ಮೌನವಾಗಿದ್ದರೆ, ನಿಮ್ಮ ಮೇಲಿನ ಕಳಂಕ ಹಾಗೆಯೇ ಉಳಿಯುತ್ತದೆ’ ಎಂದು ಅವರು ಹೇಳಿದ್ದಾರೆ.

ಭಾರತಕ್ಕೆ ನೇಮಕಗೊಂಡಿರುವ ಇಸ್ರೇಲ್‌ನ ಹೊಸ ರಾಯಭಾರಿ ನೌರ್ ಗಿಲೋನ್ ಅವರು ಗುರುವಾರ ಮಾತನಾಡಿ, ಎನ್‌ಎಸ್‌ಒ ನಂತಹ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಸರ್ಕಾರೇತರರಿಗೆ ಮಾರಾಟ ಮಾಡಲು ಇಸ್ರೇಲ್ ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದರು.

‘ಭಾರತದಲ್ಲಿ ಏನು ನಡೆಯುತ್ತಿದೆ ಎಂಬುದು ಭಾರತದ ಆಂತರಿಕ ವಿಷಯ. ನಾನು ನಿಮ್ಮ ಆಂತರಿಕ ವಿಷಯಗಳಿಗೆ ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಗಿಲೋನ್ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.