ADVERTISEMENT

ಕಾಯ್ದೆ ಸಮರ್ಥನೆಗೆ ಸಿಂಗ್‌ ಹೇಳಿಕೆ ಬಳಸಿದ ಬಿಜೆಪಿ

ವಲಸಿಗರಿಗೆ ಪೌರತ್ವ: 2003ರಲ್ಲಿ ಮಾಡಿದ್ದ ಭಾಷಣ ಇಟ್ಟುಕೊಂಡು ತಿರುಗೇಟು ನೀಡಿದ ಬಿಜೆ‍ಪಿ

ಪಿಟಿಐ
Published 19 ಡಿಸೆಂಬರ್ 2019, 19:44 IST
Last Updated 19 ಡಿಸೆಂಬರ್ 2019, 19:44 IST

ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆಯ ಅನುಷ್ಠಾನಕ್ಕೆ ಆಕ್ಷೇಪ ಎತ್ತಿರುವ ಕಾಂಗ್ರೆಸ್‌ಗೆ ತಿರುಗೇಟು ನೀಡಿರುವ ಬಿಜೆಪಿ, ನೆರೆಯ ದೇಶಗಳ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಬೇಕು ಎಂದು 2003ರಲ್ಲಿಮನಮೋಹನ್ ಸಿಂಗ್ ಅವರು ನೀಡಿದ್ದ ಹೇಳಿಕೆಯನ್ನು ಬಳಸಿಕೊಂಡಿದೆ.

‘ಮನಮೋಹನ್ ಸಿಂಗ್ ಅವರು ಪೌರತ್ವ ನೀಡಿಕೆ ಪರವಾಗಿ ನೀಡಿದ್ದ ಸಲಹೆಗಳನ್ನೇ ಈಗಿನ ಪೌರತ್ವ (ತಿದ್ದುಪಡಿ) ಕಾಯ್ದೆಯು ಹೊಂದಿದೆ’ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಗುರುವಾರ ಹೇಳಿದ್ದಾರೆ.

‘ಅಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದ ಮನಮೋಹನ್ ಸಿಂಗ್ ಅವರು ಪಕ್ಕದ ದೇಶದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವಾಗ ಉದಾರ ನೀತಿ ಅನುಸರಿಸಬೇಕು ಎಂದು ಸಲಹೆ ನೀಡಿದ್ದರು. ಅವರ ಸಲಹೆಗಳನ್ನೇ ಈಗಿನ ಹೊಸ ಪೌರತ್ವ ತಿದ್ದುಪಡಿ ಕಾಯ್ದೆ ಒಳಗೊಂಡಿದೆ’ ಎಂದು ಜಿತೇಂದ್ರ ಸಿಂಗ್ ಸಮರ್ಥಿಸಿಕೊಂಡಿದ್ದಾರೆ.

ADVERTISEMENT

‘ತನ್ನ ರಾಜಕೀಯ ಆಕಾಂಕ್ಷೆ ಈಡೇರಿಸಿಕೊಳ್ಳಲು ಹಾಗೂ ತನ್ನ ಮತಬ್ಯಾಂಕ್‌ ರಕ್ಷಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ತನ್ನ ನಿಲುವನ್ನು ಬದಲಿಸಿಕೊಂಡಿದೆ’ ಎಂದು ಅವರು ಆರೋಪಿಸಿದ್ದಾರೆ.

‘ಸದಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ನಿಲುವು ಬದಲಿಸುವ ಪ್ರತಿಪಕ್ಷಗಳ ನಡೆಯಿಂದ ಈಗಾಗಲೇ ದೇಶದಲ್ಲಿ ಸಾಮರಸ್ಯ ಕದಡಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಸಾಕಷ್ಟು ಹಾನಿಯಾಗಿದೆ’ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ರಾಜಕೀಯ ಸಂಪ್ರದಾಯವನ್ನು ಮೀರಿ, ವಿಷಯಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಿದ್ದಾರೆ ಎಂದಿದ್ದಾರೆ.

‘ಪ್ರತಿಭಟನೆ ನಡೆಸುತ್ತಿರುವವರು ಕಾಯ್ದೆಯ ಅಂಶಗಳನ್ನು ಮೊದಲು ಅಧ್ಯಯನ ನಡೆಸಿದ ಬಳಿಕ ದನಿ ಎತ್ತಬೇಕು’ ಎಂದು ಸಚಿವರು ಸಲಹೆ ನೀಡಿದ್ದಾರೆ.

ಮತಬ್ಯಾಂಕ್‌ಗೆ ಏಟು ಬೀಳುತ್ತದೆ ಎಂಬ ಕಾರಣಕ್ಕೆ ತನ್ನ ನಿಲುವು ಬದಲಿಸಿಕೊಂಡಿರುವ ಕಾಂಗ್ರೆಸ್, ದೇಶಕ್ಕೆ ಉತ್ತರ ನೀಡಬೇಕು -ಜಿತೇಂದ್ರ ಸಿಂಗ್, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.