ADVERTISEMENT

ಸಿಎಎ ವಿರೋಧಿ ಶಾಹೀನ್‌ ಬಾಗ್‌ ಹೋರಾಟದ ಕಾರ್ಯಕರ್ತ ಶಹಜಾದ್‌ ಅಲಿ ಬಿಜೆಪಿಗೆ

ಏಜೆನ್ಸೀಸ್
Published 16 ಆಗಸ್ಟ್ 2020, 16:26 IST
Last Updated 16 ಆಗಸ್ಟ್ 2020, 16:26 IST
ದೆಹಲಿ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷ ಸೇರಿದ ಶಹಜಾದ್‌ ಅಲಿ
ದೆಹಲಿ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷ ಸೇರಿದ ಶಹಜಾದ್‌ ಅಲಿ   

ದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಶಾಹೀನ್‌ ಬಾಗ್‌ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಸಾಮಾಜಿಕ ಕಾರ್ಯಕರ್ತ ಶಹಜಾದ್‌ ಅಲಿ ಅವರು ಭಾನುವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಮತ್ತು ಶ್ಯಾಮ್ ಜಾಜು ಅವರ ಸಮ್ಮುಖದಲ್ಲಿ ಶಹಜಾದ್ ಅಲಿ ಬಿಜೆಪಿಗೆ ಸೇರಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಶಹಜಾದ್ ಅಲಿ, ‘ಬಿಜೆಪಿ ನಮ್ಮ ಶತ್ರು ಎಂದು ಭಾವಿಸುವ ನಮ್ಮ ಸಮುದಾಯದವರ ಕಲ್ಪನೆ ತಪ್ಪು ಎಂಬುದನ್ನು ಸಾಬೀತುಪಡಿಸಲು ನಾನು ಬಿಜೆಪಿಗೆ ಸೇರಿದ್ದೇನೆ. ಸಿಎಎ ವಿಚಾರದ ಕುರಿತು ನಾವೆಲ್ಲರೂ ಒಟ್ಟಿಗೆ ಕುಳಿತು ಚರ್ಚೆ ನಡೆಸುತ್ತೇವೆ,’ ಎಂದು ಅವರು ಹೇಳಿದರು.

ADVERTISEMENT

ಶಹಜಾದ್‌ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಮಾತನಾಡಿದ ಆದೇಶ್‌ ಗುಪ್ತಾ, ಮುಸ್ಲಿಂ ಸಹೋದರರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಶಾಹೀನ್ ಬಾಗ್‌ನಲ್ಲಿ ಆರಂಭವಾಗಿದ್ದ ಹೋರಾಟವು ಹಲವು ತಿಂಗಳ ಕಾಲ ಮುಂದುವರಿದಿತ್ತು.

2014ರ ಡಿಸೆಂಬರ್ 31 ಕ್ಕೂ ಮೊದಲು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದ ಹಿಂದೂ, ಸಿಖ್, ಜೈನ, ಪಾರ್ಸಿ, ಬೌದ್ಧ ಮತ್ತು ಕ್ರಿಶ್ಚಿಯನ್ ನಿರಾಶ್ರಿತರಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಪೌರತ್ವ ನೀಡಲಾಗುತ್ತದೆ. ಆದರೆ, ಈ ಪಟ್ಟಿಯಲ್ಲಿ ಮುಸ್ಲಿಮರನ್ನು ಕೈಬಿಟ್ಟಿದ್ದು, ಪ್ರತಿಭಟನೆಗಳಿಗೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.