ADVERTISEMENT

ಶಿಕ್ಷಣ ಸಲಹಾ ಮಂಡಳಿಗೆ ಹೊಸರೂಪ: ಪ್ರಧಾನ್‌

ಪಿಟಿಐ
Published 8 ಅಕ್ಟೋಬರ್ 2023, 15:51 IST
Last Updated 8 ಅಕ್ಟೋಬರ್ 2023, 15:51 IST
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌   

ನವದೆಹಲಿ : ‘ಶಿಕ್ಷಣದ ನೀತಿ ನಿರ್ಧಾರಗಳ ಕುರಿತು ಸರ್ಕಾರಕ್ಕೆ ಸಲಹೆ ನೀಡುವ ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿಯನ್ನು (ಸಿಎಬಿಇ) ಪುನರ್‌ ರಚಿಸಲಾಗುವುದು’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ.

ಮೂರು ವರ್ಷಗಳಿಂದ ಸಿಎಬಿಇ ಸಭೆ ನಡೆಸದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸಿಎಬಿಇ ಹಳೆಯದಾಗಿದ್ದು, ತುಂಬಾ ವಿಶಾಲ ಚೌಕಟ್ಟು ಹೊಂದಿದೆ. ಆದರೆ, ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಬೇಡಿಕೆಗಳು ತೀರಾ ಭಿನ್ನವಾಗಿವೆ. ಇಂದಿನ ದಿನಗಳಲ್ಲಿ ಉದ್ಯಮ ಸಂಪರ್ಕದ ಬಗೆಗಿನ ಮಾತುಗಳು ಕೇಳಿಬರುತ್ತಿವೆ. ಇವೆಲ್ಲವನ್ನೂ ಪರಿಗಣಿಸಿ, ಸಿಎಬಿಇಯನ್ನು ಪುನರ್‌ರಚಿಸಲಾಗುವುದು’ ಎಂದು ತಿಳಿಸಿದ್ದಾರೆ.

‘ಕರ್ನಾಟಕ ಮತ್ತು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಗಳು ಕೇವಲ ರಾಜಕೀಯ ಕಾರಣಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೊಳಿಸುತ್ತಿಲ್ಲ’ ಎಂದು ಅವರು ಟೀಕಿಸಿದ್ದಾರೆ.

ADVERTISEMENT

ರಾಜಸ್ಥಾನದ ಕೋಟಾದಲ್ಲಿ ಸಂಭವಿಸಿದ ವಿದ್ಯಾರ್ಥಿಗಳ ಆತ್ಮಹತ್ಯೆ ಕುರಿತು ಪ್ರತಿಕ್ರಿಯಿಸಿದ ಪ್ರಧಾನ್‌ ಅವರು, ‘ಇದು ತುಂಬಾ ಸೂಕ್ಷ್ಮ ವಿಷಯ. ಯಾವುದೇ ವಿದ್ಯಾರ್ಥಿ ಪ್ರಾಣ ಕಳೆದುಕೊಳ್ಳಬಾರದು. ವಿದ್ಯಾರ್ಥಿಗಳನ್ನು ಒತ್ತಡದಿಂದ ಮುಕ್ತವಾಗುವಂತೆ ಮಾಡಬೇಕಾದ್ದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ’ ಎಂದು ಹೇಳಿದ್ದಾರೆ.

ಡಮ್ಮಿ ಕಾಲೇಜು ವಿಷಯ ಗಂಭೀರ: ‘ಡಮ್ಮಿ ಕಾಲೇಜುಗಳ ಸಮಸ್ಯೆಯನ್ನು ಕಡೆಗಣಿಸಲಾಗುವುದಿಲ್ಲ. ಆ ಕುರಿತು ಗಂಭೀರವಾಗಿ ಚರ್ಚಿಸಬೇಕಾಗಿದೆ’ ಎಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನೀಟ್‌ ಮತ್ತು ಜೆಇಇ ಆಕಾಂಕ್ಷಿಗಳು ತಮ್ಮ ತವರು ರಾಜ್ಯಗಳಲ್ಲಿನ ಕಾಲೇಜುಗಳಲ್ಲಿ ಪ್ರವೇಶ ಪಡೆದು ಕೋಚಿಂಗ್‌ ತರಗತಿಗಳಿಗೆ ಕೋಟಾಕ್ಕೆ ತೆರಳುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ವೈಯಕ್ತಿಕ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುತ್ತಿದೆ ಮತ್ತು ಒತ್ತಡಕ್ಕೆ ಸಿಲುಕುತ್ತಿದ್ದಾರೆ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.