ADVERTISEMENT

ತ್ರಿವಳಿ ತಲಾಖ್‌ ಸುಗ್ರೀವಾಜ್ಞೆ ಅವಧಿ 22ಕ್ಕೆ ಕೊನೆ

ಪಿಟಿಐ
Published 10 ಜನವರಿ 2019, 20:26 IST
Last Updated 10 ಜನವರಿ 2019, 20:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ತ್ರಿವಳಿ ತಲಾಖ್‌ ಅನ್ನು ನಿಷೇಧಿಸುವ ಸುಗ್ರೀವಾಜ್ಞೆಯ ಅವಧಿಯು ಇದೇ 22ರಂದು ಕೊನೆಯಾಗಲಿದೆ. ಈ ಸುಗ್ರೀವಾಜ್ಞೆಯನ್ನು ಕಾಯ್ದೆಯಾಗಿ ಪರಿವರ್ತಿಸುವುದಕ್ಕೆ ಮಂಡಿಸಲಾದ ಮಸೂದೆಗೆ ರಾಜ್ಯಸಭೆಯ ಅಂಗೀಕಾರ ದೊರೆತಿಲ್ಲ.

ಈ ವಿಚಾರದಲ್ಲಿ ಮತ್ತೆ ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆ ಇದೆ. ಆದರೆ, ಅದು ಯಾವಾಗ ಆಗಬಹುದು ಎಂಬುದು ಸ್ಪಷ್ಟವಿಲ್ಲ ಎಂದು ಮೂಲಗಳು ತಿಳಿಸಿವೆ.

ಸುಗ್ರೀವಾಜ್ಞೆಯು ಆರು ತಿಂಗಳು ಸಿಂಧುವಾಗಿರುತ್ತದೆ. ಆದರೆ, ಅಧಿವೇಶನ ಆರಂಭವಾದ ದಿನದಿಂದ 42 ದಿನಗಳ ಒಳಗೆ ಮಸೂದೆಯನ್ನು ಅಂಗೀಕರಿಸಬೇಕಾಗುತ್ತದೆ. ಇಲ್ಲವಾದರೆ ಸುಗ್ರೀವಾಜ್ಞೆ ರದ್ದಾಗುತ್ತದೆ.ಕಳೆದ ಡಿಸೆಂಬರ್‌ 11ರಂದು ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿತ್ತು. ಇದೇ 22ಕ್ಕೆ ಅಧಿವೇಶನ ಆರಂಭವಾಗಿ 42 ದಿನಗಳಾಗುತ್ತವೆ. ಮಸೂದೆಗೆ
ಸಂಸತ್ತಿನ ಅಂಗೀಕಾರ ದೊರಕದಿದ್ದರೆ ಮತ್ತೊಮ್ಮೆ ಸುಗ್ರೀವಾಜ್ಞೆ ಹೊರಡಿಸುವುದಕ್ಕೆ ಸರ್ಕಾರಕ್ಕೆ ಅವಕಾಶ ಇದೆ.

ADVERTISEMENT

ಸಂಸತ್ತಿನ ಬಜೆಟ್‌ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಅದಕ್ಕೆ ವಾರಕ್ಕೆ ಮುಂಚೆ ಸುಗ್ರೀವಾಜ್ಞೆ ರದ್ದಾಗುತ್ತದೆ. ಬಜೆಟ್‌ ಅಧಿವೇಶನದಲ್ಲಿಯೂ ಮಸೂದೆ ಅಂಗೀಕಾರಕ್ಕೆ ಸರ್ಕಾರ ಪ್ರಯತ್ನಿಸಬಹುದು. ಆದರೆ, ಸುಗ್ರೀವಾಜ್ಞೆ ರದ್ದಾದ ತಕ್ಷಣವೇ, ಮರಳಿ ಸುಗ್ರೀವಾಜ್ಞೆ ಹೊರಡಿಸಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಫೆಬ್ರುವರಿ ಮಧ್ಯ ಭಾಗದಲ್ಲಿ ಬಜೆಟ್‌ ಅಧಿವೇಶನ ಕೊನೆಯಾಗಲಿದೆ. ಮಸೂದೆ ಅಂಗೀಕಾರ ಸಾಧ್ಯವಾಗದಿದ್ದರೆ ಅಧಿವೇಶನ ಮುಗಿದ ಬಳಿಕವೇ ಮರಳಿ ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆಯೂ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.