ನವದೆಹಲಿ: ದೇಶದಲ್ಲಿ ನಿರ್ಣಾಯಕ ಖನಿಜಗಳ ಮರು ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟವು ಬುಧವಾರ ₹1,500 ಕೋಟಿ ಮೊತ್ತದ ಪ್ರೋತ್ಸಾಹಕ ಯೋಜನೆಗೆ ಒಪ್ಪಿಗೆ ನೀಡಿದೆ.
ದ್ವಿತೀಯ ಮೂಲಗಳಿಂದ ನಿರ್ಣಾಯಕ ಖನಿಜಗಳ ಉತ್ಪಾದನೆ ಮತ್ತು ಪ್ರತ್ಯೇಕಗೊಳಿಸುವ ಮರು ಬಳಕೆಯ ಸಾಮರ್ಥ್ಯವನ್ನು ವೃದ್ಧಿ ಮಾಡುವ ಗುರಿಯನ್ನು ಈ ಯೋಜನೆಯು ಹೊಂದಿದೆ.
ಇ–ತ್ಯಾಜ್ಯ ((ಎಲೆಕ್ಟ್ರಾನಿಕ್ ತ್ಯಾಜ್ಯ), ಲಿಥಿಯಂ ಇಯಾನ್ ಬ್ಯಾಟರಿ ತುಣುಕುಗಳು (ಎಲ್‌ಐಬಿ) ಮತ್ತು ಅವಧಿ ಮೀರಿದ ವಾಹನಗಳಲ್ಲಿನ ಕ್ಯಾಟಲಿಟಿಕ್ (ವೇಗವರ್ಧಕ/ಉತ್ಪ್ರೇರಕಗಳು) ತ್ಯಾಜ್ಯ ಸೇರಿದಂತೆ ವಿವಿಧ ತ್ಯಾಜ್ಯ ಮೂಲಗಳಿಂದ ಮರು ಬಳಕೆಯನ್ನು ಮಾಡುವ ಉದ್ದೇಶ ಹೊಂದಿರುವ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಗಣಿ ಸಚಿವಾಲಯ ತಿಳಿಸಿದೆ.
ಈ ಯೋಜನೆಯು ನಿರ್ಣಾಯಕ ಖನಿಜಗಳ ರಾಷ್ಟ್ರೀಯ ಮಿಷನ್‌ನ (ಎನ್‌ಸಿಎಂಎಂ) ಒಂದು ಭಾಗವಾಗಿರಲಿದೆ. ನಿರ್ಣಾಯಕ ಖನಿಜಗಳ ಚೇತರಿಕೆಗಾಗಿ ದೇಶೀಯ ಸಾಮರ್ಥ್ಯ ಮತ್ತು ಪೂರೈಕೆ ಸರಪಳಿಯನ್ನು ಸೃಷ್ಟಿಸುವ ಉದ್ದೇಶ ಯೋಜನೆಯ ಭಾಗವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.