ADVERTISEMENT

ಪಿಎಂ ಕೇರ್ಸ್ ನಿಧಿ ಸ್ಥಾಪಿಸುವ ಬಗ್ಗೆ ಕೇಂದ್ರ ಸಂಪುಟದಲ್ಲಿ ಚರ್ಚೆಯೇ ಆಗಿರಲಿಲ್ಲ!

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2020, 3:23 IST
Last Updated 22 ಆಗಸ್ಟ್ 2020, 3:23 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ    

ನವದೆಹಲಿ:ಕೋವಿಡ್‌–19 ಎದುರಿಸಲು ನೆರವಾಗುವ ಉದ್ದೇಶದಿಂದ ಪಿಎಂ–ಕೇರ್ಸ್ ನಿಧಿ ಸ್ಥಾಪಿಸುವ ಮುನ್ನ ಈ ಬಗ್ಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯೇ ನಡೆದಿಲ್ಲ. ಈ ನಿಧಿ ಸ್ಥಾಪನೆಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಲಾಗಿದ್ದ ಅರ್ಜಿಗೆ ಕೇಂದ್ರ ಸರ್ಕಾರ ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ. ಈ ನಿಧಿಯನ್ನು ಕುರಿತು ವಿವಿಧ ಸಚಿವಾಲಯಗಳು ನೀಡಿರುವ ಉತ್ತರಗಳು ವ್ಯತಿರಿಕ್ತವಾಗಿವೆ.

ಮಾಹಿತಿ ಹಕ್ಕು ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಈ ಅರ್ಜಿಗಳನ್ನು ಸಲ್ಲಿಸಿದ್ದರು.

‘ಯಾವುದೇ ಸಂಪುಟ ಸಭೆಯ ಕಾರ್ಯಸೂಚಿಯಲ್ಲಿಯೂ ಪಿಎಂ–ಕೇರ್ಸ್ ನಿಧಿ ಸ್ಥಾಪನೆ ಬಗ್ಗೆ ಉಲ್ಲೇಖ ಇರಲಿಲ್ಲ’ ಎಂದು ಕೇಂದ್ರ ಸಂಪುಟ ಕಾರ್ಯಾಲಯವು ಆರ್‌ಟಿಐ ಅರ್ಜಿಗೆ ಉತ್ತರ ನೀಡಿದೆ.

ADVERTISEMENT

‘ಇದು ಸಾರ್ವಜನಿಕ ಸೇವಾ ಟ್ರಸ್ಟ್. ಹೀಗಾಗಿ ಇದಕ್ಕೆ ಬಂದಿರುವ ದೇಣಿಗೆಗಳ ವಿವರ ನೀಡಲು ಸಾಧ್ಯವಿಲ್ಲ’ ಎಂದು ಕೇಂದ್ರ ಸರ್ಕಾರವು ಆರ್‌ಟಿಐ ಅರ್ಜಿಯೊಂದಕ್ಕೆ ಈ ಹಿಂದೆ ಉತ್ತರ ನೀಡಿತ್ತು. ಆದರೆ, ‘ಇದು ಕೇಂದ್ರ ಸರ್ಕಾರ ಸ್ಥಾಪಿಸಿರುವ ನಿಧಿ. ಈ ನಿಧಿಗೆ ನೀಡುವ ದೇಣಿಗೆಯು ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಅಡಿ ಬರುತ್ತದೆ’ ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಹೇಳಿದೆ.

ಪಿಎಂ–ಕೇರ್ಸ್ ನಿಧಿಯಿಂದ ಕಾರ್ಮಿಕ ಸಚಿವಾಲಯಕ್ಕೆ ₹ 1,000 ಕೋಟಿ ನೀಡಲಾಗಿದೆ. ಆದರೆ ಈ ಬಗ್ಗೆ ಕೇಳಿದ ವಿವರವನ್ನು ಸಚಿವಾಲಯವು ನೀಡಿಲ್ಲ. ‘ಪಿಎಂ–ಕೇರ್ಸ್‌ ಸರ್ಕಾರಿ ಪ್ರಾಧಿಕಾರವಲ್ಲ. ಅದಕ್ಕೆ ಸಂಬಂಧಿಸಿದ ವಿವರಗಳು, ಅದರ ಜಾಲತಾಣದಲ್ಲಿ ಸಿಗುತ್ತವೆ’ ಎಂದು ಸಚಿವಾಲಯವು ಉತ್ತರಿಸಿದೆ. ‘₹ 1,000 ಕೋಟಿ ನೀಡಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ’ ಎಂದು ಮುಖ್ಯ ಕಾರ್ಮಿಕ ಆಯುಕ್ತರು ಉತ್ತರಿಸಿದ್ದಾರೆ.

ಆರ್‌ಟಿಐ ಅಡಿ ಸಲ್ಲಿಸಲಾದ ಅರ್ಜಿಗೆ ಕಾನೂನು ಸಚಿವಾಲಯವು ಉತ್ತರ ನೀಡಿಲ್ಲ.

**

ಪ್ರಧಾನಿ ಅಧ್ಯಕ್ಷರಾಗಿರುವ, ಮೂವರು ಕೇಂದ್ರ ಸಚಿವರು ಟ್ರಸ್ಟಿಗಳಾಗಿರುವ ನಿಧಿ ಸ್ಥಾಪನೆ ವಿಚಾರ ಕೇಂದ್ರ ಸಚಿವ ಸಂಪುಟದಲ್ಲಿ ಚರ್ಚಿಸಲಾಗಿಲ್ಲ ಎಂಬುದೇ ವಿಚಿತ್ರ.
-ಅಂಜಲಿ ಭಾರದ್ವಾಜ್, ಆರ್‌ಟಿಐ ಕಾರ್ಯಕರ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.