ADVERTISEMENT

ಸಿಎಜಿ ವರದಿ ಮಂಡನೆಗೆ ವಿಳಂಬ: ಹೈಕೋರ್ಟ್‌ ಗರಂ

​ಪ್ರಜಾವಾಣಿ ವಾರ್ತೆ
Published 13 ಜನವರಿ 2025, 15:35 IST
Last Updated 13 ಜನವರಿ 2025, 15:35 IST
ದೆಹಲಿ ಹೈಕೋರ್ಟ್‌
ದೆಹಲಿ ಹೈಕೋರ್ಟ್‌   

ನವದೆಹಲಿ: ‘ದೆಹಲಿ ಸರ್ಕಾರದ ನೀತಿಗಳ ಕುರಿತಂತೆ ಮಹಾಲೇಖಪಾಲರ ವರದಿ (ಸಿಎಜಿ)ಯನ್ನು ಅಧಿವೇಶನದಲ್ಲಿ ಮಂಡಿಸಬೇಕಿತ್ತು. ಆದರೆ, ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಗಮನಿಸಿದರೆ, ಸರ್ಕಾರದ ಪ್ರಾಮಾಣಿಕತೆಯ ಮೇಲೆ ಅನುಮಾನ ಮೂಡಿದೆ’ ಎಂದು ದೆಹಲಿ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

ಸಿಎಜಿ ವರದಿಯನ್ನು ವಿಧಾನಸಭೆಯಲ್ಲಿ ಚರ್ಚಿಸಲು ಸ್ಪೀಕರ್‌ಗೆ ನಿರ್ದೇಶನ ನೀಡಬೇಕು ಎಂದು ಕೋರಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜೇಂದರ್‌ ಗುಪ್ತಾ, ಬಿಜೆಪಿ ಶಾಸಕರಾದ ಮೋಹನ್‌ ಸಿಂಗ್, ಓಂಪ್ರಕಾಶ್‌ ಶರ್ಮಾ, ಅಜಯ್‌ ಕುಮಾರ್‌ ಮಹಾವರ್‌, ಅನಿಲ್‌ ಕುಮಾರ್‌ ಬಾಜಪೇಯಿ ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಸಚಿನ್‌ ದತ್ತಾ, ‘ಚರ್ಚೆಯಾಗುವುದನ್ನು ತಪ್ಪಿಸುವ ಉದ್ದೇಶದಿಂದಲೇ ವರದಿ ಮಂಡನೆ ವಿಳಂಬ ಮಾಡಿರುವುದು ಕಂಡುಬರುತ್ತಿದೆ. ನೀವು ವರದಿಯನ್ನು ಲೆಫ್ಟಿನೆಂಟ್‌ ಗವರ್ನರ್‌ಗೆ ಕಳುಹಿಸಿದ ಅವಧಿ, ನಂತರ ಸ್ಪೀಕರ್‌ಗೆ ಕಳುಹಿಸಿದ ದಿನಾಂಕ ಗಮನಿಸಿದರೆ ವಿಳಂಬ ಧೋರಣೆ ಅನುಸರಿಸುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ’ ಎಂದು ತಿಳಿಸಿತು.

ADVERTISEMENT

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲರು, ‘ನ್ಯಾಯಾಲಯಕ್ಕೆ ರಾಜಕೀಯ ಪ್ರೇರಿತ ಅರ್ಜಿ ಸಲ್ಲಿಸಲಾಗಿದೆ. ಸಿಎಜಿ ವರದಿಯನ್ನು ಎಲ್‌.ಜಿ. ಕಚೇರಿಯಿಂದ ಬಹಿರಂಗಗೊಳಿಸಿ, ನಂತರ ಮಾಧ್ಯಮಗಳಿಗೂ ಸೋರಿಕೆ ಮಾಡಲಾಗಿದೆ’ ಎಂದು ತಿಳಿಸಿದರು. 

‘ಇದು ವಿಧಾನಸಭೆಯ ಕಾರ್ಯವಿಧಾನದ ಆಂತರಿಕ ವಿಚಾರವಾಗಿದೆ. ಈ ಕುರಿತು ಸ್ಪೀಕರ್‌ ಅವರಿಗೆ ನ್ಯಾಯಾಲಯವು ನಿರ್ದೇಶನ ನೀಡಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿಗಳು ಸ್ಪಷ್ಪಪಡಿಸಿದರು.

ದೆಹಲಿಯ ಆಮ್‌ ಆದ್ಮಿ ಪಕ್ಷದ ನೇತೃತ್ವದ ಸರ್ಕಾರದ ನೀತಿಗಳ ಕುರಿತಂತೆ ಸಿಎಜಿ ವರದಿಯಲ್ಲಿ ಟೀಕಿಸಲಾಗಿದ್ದು, ಈಗ ರದ್ದಾಗಿರುವ ಅಬಕಾರಿ ನೀತಿಯಿಂದ ಸರ್ಕಾರದ ಖಜಾನೆಗೆ ಆರ್ಥಿಕ ನಷ್ಟ ಉಂಟಾಗಿರುವುದನ್ನು ಉಲ್ಲೇಖಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.