ADVERTISEMENT

ಅಕ್ರಮ ನೇಮಕಾತಿ: ಶಿಕ್ಷಕಿ ಹುದ್ದೆಯಿಂದ ಸಚಿವರ ಪುತ್ರಿ ವಜಾ

ಪಿಟಿಐ
Published 20 ಮೇ 2022, 20:03 IST
Last Updated 20 ಮೇ 2022, 20:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ಪಶ್ಚಿಮ ಬಂಗಾಳದ ಶಿಕ್ಷಣ ಸಚಿವರ ಪುತ್ರಿಯನ್ನು ಶಿಕ್ಷಕಿ ಹುದ್ದೆಯಿಂದ ವಜಾ ಮಾಡಿರುವ ಕಲ್ಕತ್ತ ಹೈಕೋರ್ಟ್‌, ಅವರು ಶಿಕ್ಷಕಿಯಾಗಿ 2018ರಿಂದ 41 ತಿಂಗಳು ಪಡೆದಿದ್ದ ವೇತನವನ್ನು ಎರಡು ಕಂತುಗಳಲ್ಲಿ ವಾಪಸು ಮಾಡಬೇಕು ಎಂದು ಆದೇಶಿಸಿದೆ.

ಶಿಕ್ಷಣ ಸಚಿವ ಪರೇಶ್‌ ಚಂದ್ರ ಅಧಿಕಾರಿ ಅವರ ಪುತ್ರಿ ಅಂಕಿತಾ ಅಧಿಕಾರಿ ಅವರು ಸರ್ಕಾರಿ ಅನುದಾನಿತ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ನ್ಯಾಯಮೂರ್ತಿ ಅವಿಜಿತ್ ಗಂಗೋಪಾಧ್ಯಾಯ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಜೂನ್‌ 7ರ ಒಳಗೆ ಮೊದಲ ಮತ್ತು ಜುಲೈ 7ರ ಒಳಗೆ ಎರಡನೇ ಕಂತಿನಲ್ಲಿ ವೇತನವನ್ನು ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರಲ್ಲಿ ಠೇವಣಿ ಇಡಬೇಕು ಎಂದು ತಿಳಿಸಿದೆ. ನೇಮಕಾತಿ ಪರೀಕ್ಷೆಯಲ್ಲಿ ಅಂಕಿತಾ ಅವರಿಗಿಂತ ಹೆಚ್ಚು ಅಂಕ ಪಡೆದಿದ್ದರೂ ತಮಗೆ ಅವಕಾಶ ನಿರಾಕರಿಸಲಾಗಿದೆ ಎಂದು ಅವಕಾಶ ವಂಚಿತ ಅಭ್ಯರ್ಥಿ ಕೋರ್ಟ್‌ ಮೊರೆ ಹೋಗಿದ್ದರು.

ADVERTISEMENT

ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ (ಎಸ್‌ಎಸ್‌ಸಿ) ಶಿಫಾರಸು ಆಧರಿಸಿ, ಪಶ್ಚಿಮ ಬಂಗಾಳ ಪ್ರೌಢಶಿಕ್ಷಣ ಮಂಡಳಿಯು ಮಾಡಿದ್ದ ನೇಮಕಾತಿಯನ್ನು ಪರಿಗಣಿಸಬಾರದು ಎಂದು ಕೋರ್ಟ್‌ ಆದೇಶಿಸಿದ್ದು, ಶಾಲಾ ಆವರಣ ಪ್ರವೇಶಿಸದಂತೆ ಶಿಕ್ಷಕಿಗೆ ತಾಕೀತು ಮಾಡಿದೆ.

ಪುತ್ರಿಯ ಅಕ್ರಮ ನೇಮಕಾತಿ ಪ್ರಕರಣ ಕುರಿತ ವಿಚಾರಣೆಗಾಗಿ ಇದಕ್ಕೂ ಮೊದಲು ಸಚಿವರು ಸಿಬಿಐ ಕಚೇರಿಗೆ ಬಂದಿದ್ದರು. ಹೈಕೋರ್ಟ್ ಸೂಚನೆಯಂತೆ ನಿಗದಿತ ಅವಧಿಗೆ ವಿಚಾರಣೆಗೆ ಹಾಜರಾಗದ ಕಾರಣ ಸಿಬಿಐ, ಸಚಿವರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿತ್ತು.

ಶಿಕ್ಷಣ ಸಚಿವ ಮತ್ತು ಅವರ ಪುತ್ರಿಯ ವಿರುದ್ಧ ಸಿಬಿಐ, ಐಪಿಸಿ ಸೆಕ್ಷನ್‌ 420 (ವಂಚನೆ), 120ಬಿ (ಕ್ರಿಮಿನಲ್ ಸಂಚು) ಅನ್ವಯ ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯನ್ವಯ ಮೊಕದ್ದಮೆ ದಾಖಲಿಸಿದೆ. ಈ ಪ್ರಕರಣ ಕುರಿತು ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿತ್ತು.

ಟಿಎಂಸಿ ರ‍್ಯಾಲಿ: ಸಚಿವ ಪರೇಶ್‌ ಚಂದ್ರ ಅಧಿಕಾರಿ ಅವರು ಪ್ರತಿನಿಧಿಸುವ ಕ್ಷೇತ್ರ ಬೆಹಲ ಪಶ್ಚಿಮ್‌ನಲ್ಲಿ ಟಿಎಂಸಿ ಪಕ್ಷವು ಶುಕ್ರವಾರ ರ‍್ಯಾಲಿ ನಡೆಯಿತು. ಟಿಎಂಸಿ ಸರ್ಕಾರದ ಸಾಧನೆ ಬಿಂಬಿಸುವುದು ಇದರ ಉದ್ದೇಶ ಎಂದು ಪಕ್ಷ ಹೇಳಿಕೊಂಡಿತು. ಆದರೆ, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ಫೋಟೊ ವೈರಲ್‌ ಆಗಿದ್ದು, ಸಚಿವರ ವಿರುದ್ಧದ ಸಿಬಿಐ ವಿಚಾರಣೆ ಪ್ರತಿಭಟಿಸುವುದೇ ಉದ್ದೇಶ ಎಂದು ನೆಟ್ಟಿಗರು ಪ್ರತಿಪಾದಿಸಿದ್ದಾರೆ. ಈ ಮಧ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಸಚಿವರು ರಾಜೀನಾಮೆ ನೀಡಬೇಕು ಎಂದು ವಿರೋಧಪಕ್ಷಗಳು ಆಗ್ರಹಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.