ADVERTISEMENT

ನಾರದಾ ಪ್ರಕರಣ: ಬಂಧಿತ ಟಿಎಂಸಿ ಮುಖಂಡರಿಗೆ ಮಧ್ಯಂತರ ಜಾಮೀನು

ಪಿಟಿಐ
Published 28 ಮೇ 2021, 19:18 IST
Last Updated 28 ಮೇ 2021, 19:18 IST
   

ಕೋಲ್ಕತ್ತ: ಪಶ್ಚಿಮ ಬಂಗಾಳದ ಸಚಿವರಾದ ಫಿರ್ಹಾದ್‌ ಹಕೀಮ್‌ ಮತ್ತು ಸುಬ್ರತಾ ಮುಖರ್ಜಿ, ಟಿಎಂಸಿ ಶಾಸಕ ಮದನ್‌ ಮಿತ್ರಾ ಹಾಗೂ ಕೋಲ್ಕತ್ತದ ಮಾಜಿ ಮೇಯರ್‌ ಸೋವನ್‌ ಚಟರ್ಜಿ ಅವರಿಗೆ ಕಲ್ಕತ್ತಾ ಹೈಕೋರ್ಟ್‌ನಾರದಾ ಲಂಚ ಹಗರಣದಲ್ಲಿ ಶುಕ್ರವಾರ ಮಧ್ಯಂತರ ಜಾಮೀನು ನೀಡಿದೆ.

ಈವರೆಗೆ ಗೃಹ ಬಂಧನದಲ್ಲಿ ಇದ್ದ ಆರೋಪಿಗಳಿಗೆ ಹಲವು ಷರತ್ತುಗಳನ್ನು ವಿಧಿಸಿ ಜಾಮೀನು ಕೊಡಲಾ ಗಿದೆ. ತಲಾ ₹2 ಲಕ್ಷ ಮೌಲ್ಯದ ಬಾಂಡ್‌ ನೀಡುವಂತೆಯೂ ಐವರು ನ್ಯಾಯಮೂರ್ತಿಗಳ ಪೀಠವು ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಬಾರದು, ತನಿಖಾಧಿಕಾರಿಯು ಬಯಸಿದರೆ ವರ್ಚುವಲ್ ಮಾಧ್ಯಮದ ಮೂಲಕ ತನಿಖೆಗೆ ಹಾಜರಾಗಬೇಕು ಎಂದು ಪೀಠವು ನಿರ್ದೇಶನ ನೀಡಿದೆ.

ADVERTISEMENT

ನಾರದಾ ಸುದ್ದಿಜಾಲತಾಣವು ನಡೆಸಿದ ಮಾರುವೇಷದ ಕಾರ್ಯಾಚರಣೆಯಲ್ಲಿ ಟಿಎಂಸಿಯ ಮುಖಂಡರು ಲಂಚ ಪಡೆದಿದ್ದಾರೆ ಎಂಬ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಕಲ್ಕತ್ತಾ ಹೈಕೋರ್ಟ್ 2017ರಲ್ಲಿ ಆದೇಶ ನೀಡಿತ್ತು. ನಾಲ್ವರು ಆರೋಪಿ ಗಳನ್ನು ಸಿಬಿಐ ಇದೇ 17ರಂದು ಬಂಧಿಸಿತ್ತು.

ಸಿಬಿಐ ವಿಶೇಷ ನ್ಯಾಯಾಲಯವು ಆರೋಪಿಗಳಿಗೆ ಅದೇ ದಿನ ಜಾಮೀನು ನೀಡಿತ್ತಾದರೂ ಹೈಕೋರ್ಟ್‌ ಅದಕ್ಕೆ ತಡೆ ಕೊಟ್ಟಿತ್ತು. ಹಾಗಾಗಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.