ADVERTISEMENT

ಪಶ್ಚಿಮ ಬಂಗಾಳದ ಅಭಿವೃದ್ಧಿಗಾಗಿ ಮೋದಿಯವರ ಕಾಲು ಹಿಡಿಯಲೂ ಸಿದ್ಧ: ಮಮತಾ ಬ್ಯಾನರ್ಜಿ

ಪಿಟಿಐ
Published 29 ಮೇ 2021, 17:44 IST
Last Updated 29 ಮೇ 2021, 17:44 IST
ಮಮತಾ ಬ್ಯಾನರ್ಜಿ (ಪಿಟಿಐ ಸಂಗ್ರಹ ಚಿತ್ರ)
ಮಮತಾ ಬ್ಯಾನರ್ಜಿ (ಪಿಟಿಐ ಸಂಗ್ರಹ ಚಿತ್ರ)   

ಕೋಲ್ಕತ್ತ: ಪಶ್ಚಿಮ ಬಂಗಾಳದ ಮುಖ್ಯಕಾರ್ಯದರ್ಶಿ ವರ್ಗಾವಣೆ ಪ್ರಕರಣವು ಕೇಂದ್ರ ಸರ್ಕಾರ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ಜಟಾಪಟಿಗೆ ಕಾರಣವಾಗಿದೆ.

‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದ್ವೇಷದ ರಾಜಕಾರಣದಲ್ಲಿ ತೊಡಗಿದೆ’ ಎಂದು ಮಮತಾ ಅವರು ಶನಿವಾರಆರೋಪಿಸಿದ್ದಾರೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯ ಅವರನ್ನು ವಾಪಸ್‌ ಕರೆಸಿಕೊಂಡ ನಿರ್ಧಾರವನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿರುವ ಅವರು, ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಹಿರಿಯ ಅಧಿಕಾರಿಯ ಸೇವೆ ರಾಜ್ಯಕ್ಕೆ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

‘ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಬಂಗಾಳ ವಿಧಾನಸಭಾ ಚುನಾವಣೆಯ ಸೋಲಿನಿಂದ ಇನ್ನೂ ಹೊರಬಂದಿಲ್ಲ. ಹೀಗಾಗಿ ತಮ್ಮ ಸರ್ಕಾರಕ್ಕೆ ಪ್ರತಿ ಹಂತದಲ್ಲೂ ಸಮಸ್ಯೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಮಮತಾ ದೂರಿದ್ದಾರೆ.

ADVERTISEMENT

‘ವಾಪಸ್ ಕರೆಸಿಕೊಳ್ಳುವಂತಹ ಯಾವ ತಪ್ಪನ್ನು ಮುಖ್ಯ ಕಾರ್ಯದರ್ಶಿ ಮಾಡಿದ್ದಾರೆ. ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಕೇಂದ್ರ ತೆಗೆದುಕೊಂಡಿರುವ ಈ ಕ್ರಮವು ದ್ವೇಷದ ರಾಜಕಾರಣವನ್ನು ತೋರಿಸುತ್ತದೆ’ ಎಂದಿದ್ದಾರೆ.

ಬಂಡೋಪಾಧ್ಯಾಯ ಅವರು ದೆಹಲಿಯಲ್ಲಿರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಮೇ 31ರಂದು ವರದಿ ಮಾಡಿಕೊಳ್ಳಬೇಕು ಎಂದು ಕೇಂದ್ರ ತಿಳಿಸಿತ್ತು. ನಿವೃತ್ತರಾಗಿದ್ದ ಬಂಡೋಪಾಧ್ಯಾಯ ಅವರ ಸೇವಾವಧಿಯನ್ನು ಮೂರು ತಿಂಗಳು ವಿಸ್ತರಿಸುವಂತೆ ಮಮತಾ ಇತ್ತೀಚೆಗೆ ಕೇಂದ್ರಕ್ಕೆ ಕೋರಿದ್ದರು. ಅದರನ್ವಯ ಕೇಂದ್ರ ಮೇ 24ರಂದು ಸೇವಾವಧಿ ವಿಸ್ತರಣೆ ಆದೇಶ ಹೊರಡಿಸಿತ್ತು.

‘ರಾಜ್ಯದ ಜನರಿಗಾಗಿ ಮೋದಿ ಅವರ ಪಾದ ಮುಟ್ಟಲೂ ಸಿದ್ಧ’ ಎಂದು ಮಮತಾ ಘೋಷಿಸಿದ್ದಾರೆ. ಕೇಂದ್ರದ ಸಂಕುಚಿತ ಮನಸ್ಥಿತಿಯಿಂದಾಗಿ ತಮಗೆ ಹಾಗೂ ಬಂಡೋಪಾಧ್ಯಾಯ ಅವರಿಗೆ ಅವಮಾನ ಆಗಿದೆ ಎಂದಿದ್ದಾರೆ.

ಪ್ರತಿಪಕ್ಷದ ಮುಖಂಡರು ಬಂದಿದ್ದೇಕೆ?
ಚಂಡಮಾರುತದಿಂದ ಆಗಿರುವ ಹಾನಿಯ ಕುರಿತು ಪ್ರಧಾನಿ ಮೋದಿಯವರು ನಡೆಸಿದ ಪರಿಶೀಲನಾ ಸಭೆಯನ್ನು ಕೈಬಿಟ್ಟಿದ್ದಕ್ಕೆ ಎದುರಾಗಿರುವ ಟೀಕೆಗಳಿಗೆ ಮಮತಾ ಉತ್ತರಿಸಿದ್ದಾರೆ. ‘ಸಭೆಯು ಪ್ರಧಾನಿ ಮತ್ತು ಮುಖ್ಯಮಂತ್ರಿ ನಡುವೆ ನಡೆಯಬೇಕಿತ್ತು. ಆದರೆ ಈ ಸಭೆಗೆ ಬಿಜೆಪಿ ನಾಯಕರನ್ನು ಏಕೆ ಕರೆಸಲಾಯಿತು’ ಎಂದು ಪ್ರಶ್ನಿಸಿದ್ದಾರೆ.

ಮಮತಾ ಅವರು ಒಂದು ಕಾಲದ ಆಪ್ತ ಹಾಗೂ ಈಗ ಬಿಜೆಪಿಯಲ್ಲಿರುವ ಸುವೇಂದು ಅಧಿಕಾರಿ ಅವರು ಸಭೆಯಲ್ಲಿ ಹಾಜರಿದ್ದರು.

ಕೆಲ ದಿನಗಳ ಹಿಂದೆ ಗುಜರಾತ್‌ ಮತ್ತು ಒಡಿಶಾದಲ್ಲಿ ನಡೆದ ಚಂಡಮಾರುತ ಹಾನಿ ಕುರಿತ ಪರಿಶೀಲನಾ ಸಭೆಗೆ ಪ್ರತಿಪಕ್ಷಗಳ ಮುಖಂಡರನ್ನು ಕರೆದಿರಲಿಲ್ಲ ಎಂದು ಮಮತಾ ನೆನಪು ಮಾಡಿದ್ದಾರೆ.

ಕಲೈಕುಂಡ ವಾಯುನೆಲೆಯಲ್ಲಿ ಪ್ರಧಾನಿ ಅವರನ್ನು ಮಮತಾ ತುಂಬಾ ಸಮಯ ಕಾಯಿಸಿದರು ಎಂಬುದಾಗಿ ಬಿಜೆಪಿ ಮಾಡುತ್ತಿರುವ ಆರೋಪಗಳನ್ನು ಮುಖ್ಯಮಂತ್ರಿ ಅಲ್ಲಗಳೆದಿದ್ದಾರೆ. ‘ನನ್ನ ಹೆಲಿಕಾಪ್ಟರ್‌ ಲ್ಯಾಂಡಿಂಗ್ ಆಗುವುದನ್ನು 20 ನಿಮಿಷ ಮುಂದೂಡಲಾಯಿತು. ಎಸ್‌ಪಿಜಿ ಅಧಿಕಾರಿಗಳು ಕನಿಷ್ಠ ಒಂದು ಗಂಟೆ ಕಾಯಬೇಕು ಎಂದು ತಿಳಿಸಿದ್ದರು’ ಎಂದು ಅವರು ವಿವರಣೆ ನೀಡಿದ್ದಾರೆ.

***

ಮುಖ್ಯ ಕಾರ್ಯದರ್ಶಿಯು ಬಂಗಾಳಿ ಆಗಿರುವುದರಿಂದ ಅವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತಾರೆ ಎಂದರೆ ನನಗೆ ಅಚ್ಚರಿಯಾಗುತ್ತದೆ.
-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

***

ಸಭೆಗೆ ಬಾರದೇ ಪ್ರಧಾನಿ ಅವರಿಗೆ ಮಮತಾ ಅಪಮಾನ ಮಾಡಿದ್ದಾರೆ. ತನ್ನ ನಿಲುವಿನಿಂದ ಸೊಕ್ಕು ಮತ್ತು ಸಣ್ಣತನದ ರಾಜಕೀಯ ಪ್ರದರ್ಶಿಸಿದ್ದಾರೆ.
-ಸುವೇಂದು ಅಧಿಕಾರಿ, ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.