ಒಟ್ಟಾವಾ: ‘ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರು ಲಸಿಕೆ ಪಡೆಯುವುದಕ್ಕಿಂತ ಮುನ್ನವೇ ನಿರ್ಬಂಧಗಳನ್ನು ಸಡಿಲಗೊಳಿಸಿದರೆ, ಡೆಲ್ಟಾ ರೂಪಾಂತರ ತಳಿಯಿಂದಾಗಿ ಬೇಸಿಗೆ ಅಂತ್ಯದ ವೇಳೆಗೆ ಕೋವಿಡ್‌ನ ನಾಲ್ಕನೇ ಅಲೆಯನ್ನು ಎದುರಿಸಬೇಕಾಗುತ್ತದೆ’ ಎಂದು ಕೆನಡಾದ ಮುಖ್ಯ ಸಾರ್ವಜನಿಕ ಆರೋಗ್ಯ ಅಧಿಕಾರಿ ಡಾ. ಥೆರೆಸಾ ಟಾಮ್ ಎಚ್ಚರಿಕೆ ನೀಡಿದ್ದಾರೆ.
‘ಲಸಿಕೆಯಿಂದಾಗಿ ಆಸ್ಪತ್ರೆಗಳಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಸಾವಿನ ಪ್ರಮಾಣದಲ್ಲೂ ಇಳಿಕೆ ಕಂಡುಬಂದಿದೆ. ಆದರೆ, ಕೋವಿಡ್ ಪ್ರಸರಣವನ್ನು ತಡೆಯಲು ಲಸಿಕಾ ಅಭಿಯಾನವನ್ನು ಇನ್ನಷ್ಟು ಹೆಚ್ಚಿಸಬೇಕು. ಯುವಕರು ಲಸಿಕೆ ಪಡೆಯಬೇಕು. ಇದುವರೆಗೆ, ಯುವಕರೇ ಅತಿ ಕಡಿಮೆ ಸಂಖ್ಯೆಯಲ್ಲಿ ಲಸಿಕೆ ಪಡೆದಿದ್ದಾರೆ’ ಎಂದು ತಿಳಿಸಿದ್ದಾರೆ.
‘ಕೆನಡಾದಲ್ಲಿ ಸುಮಾರು 63 ಲಕ್ಷ ಜನರು ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿಲ್ಲ ಮತ್ತು 50 ಲಕ್ಷ ಮಂದಿ ಎರಡನೇ ಡೋಸ್‌ಗಾಗಿ ಕಾಯುತ್ತಿದ್ದಾರೆ’ ಎಂದು ಹೇಳಿದ್ದಾರೆ.
‘ಕೆನಡಾದಲ್ಲಿ ಶನಿವಾರದ ವೇಳೆಗೆ 70 ವರ್ಷ ಮೇಲ್ಪಟ ಶೇಕಡ 89ರಷ್ಟು ವಯಸ್ಕರು ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. ಆದರೆ, 18 ರಿಂದ 29 ವಯಸ್ಸಿನೊಳಗಿನ ಶೇಕಡ 46ರಷ್ಟು ಮಂದಿ ಮಾತ್ರ ಸಂಪೂರ್ಣ ಲಸಿಕೆಯನ್ನು ಪಡೆದಿದ್ದಾರೆ. 30–39 ವಯೋಮಿತಿಯ ಶೇಕಡ 54ರಷ್ಟು ಜನರು ಲಸಿಕೆಯ ಎರಡೂ ಡೋಸ್‌ಗಳನ್ನು ಸ್ವೀಕರಿಸಿದ್ದಾರೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.