ADVERTISEMENT

ಇದೇ 24ರಿಂದ ಸಿಯುಇಟಿ–ಯುಜಿ ಪರೀಕ್ಷೆ 

ತಾಂತ್ರಿಕ ಕಾರಣದಿಂದ ರದ್ದಾಗಿದ್ದ ಪರೀಕ್ಷೆಗೆ ಹೊಸ ದಿನಾಂಕ ಪ್ರಕಟ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 13:05 IST
Last Updated 7 ಆಗಸ್ಟ್ 2022, 13:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ತಾಂತ್ರಿಕ ಕಾರಣಗಳಿಂದ ರದ್ದುಗೊಂಡಿದ್ದ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಯುಇಟಿ– ಯುಜಿ) ಆ.24 ರಿಂದ 28ರ ವರೆಗೆ ನಡೆಸಲಾಗುವುದು.ಹೊಸದಾಗಿ ಪ್ರವೇಶ ಪತ್ರಗಳನ್ನು ಕಳುಹಿಸಲಾಗುವುದು ಎಂದುರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಅಧಿಕಾರಿಗಳು ತಿಳಿಸಿದ್ದಾರೆ.

‘ಆಡಳಿತಾತ್ಮಕ ಮತ್ತು ತಾಂತ್ರಿಕ ಕಾರಣಗಳಿಂದ ಕೆಲ ಕೇಂದ್ರಗಳಲ್ಲಿ ಆ. 4 ರಿಂದ 6 ರ ನಡುವೆ ನಿಗದಿಯಾಗಿದ್ದ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಈ ಹಿಂದೆಯೇ ಆ. 12 ರಿಂದ 14ರ ವರೆಗೆ ಪರೀಕ್ಷೆ ನಡೆಸುವುದಾಗಿ ಘೋಷಿಸಿದ್ದೆವು. ಅಭ್ಯರ್ಥಿಗಳಿಗೆ ಈ ವೇಳಾಪಟ್ಟಿ ಸೂಕ್ತವಲ್ಲದಿದ್ದಲ್ಲಿ ಬೇರೆ ದಿನಾಂಕ ತಿಳಿಸುವ ಆಯ್ಕೆಯನ್ನು ನೀಡಲಾಗಿತ್ತು’ ಎಂದು ಎನ್‌ಟಿಎ ಹಿರಿಯ ನಿರ್ದೇಶಕಿ ಸಾಧನಾ ಪರಾಶರ ತಿಳಿಸಿದ್ದಾರೆ.

‘ಒಟ್ಟು 15,811 ಅಭ್ಯರ್ಥಿಗಳು ಆ. 12 ರಿಂದ 14 ರ ವರೆಗೆ ಬೇರೆ ದಿನಾಂಕ ತಿಳಿಸಿದ್ದಾರೆ.ಅದೇ ರೀತಿ ಹಲವು ಅಭ್ಯರ್ಥಿಗಳು ಹಬ್ಬಗಳು ಇರುವ ಕಾರಣ ಈ ಅವಧಿಯಲ್ಲಿ ಪರೀಕ್ಷೆ ನಿಗದಿಪಡಿಸದಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಅನೇಕ ಅಭ್ಯರ್ಥಿಗಳು ಎರಡನೇ ಹಂತದಲ್ಲಿ (ಆ.4 ರಿಂದ 6) ನೀಡಲಾದ ನಗರಗಳು ಸೂಕ್ತವಲ್ಲದ ಕಾರಣ ದಿನಾಂಕ ಅಥವಾ ನಗರ ಬದಲಾಯಿಸುವಂತೆ ವಿನಂತಿಸಿದ್ದರು’ ಎಂದು ಅವರು ಹೇಳಿದರು.

ADVERTISEMENT

ಈ ಎಲ್ಲಾ ಮನವಿಗಳನ್ನು ಗಮನದಲ್ಲಿಟ್ಟುಕೊಂಡು ಆ.24 –28ರ ನಡುವೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಪರೀಕ್ಷೆಗೂ ಮೊದಲು ಹೊಸ ಪ್ರವೇಶ ಪತ್ರ ನೀಡಲಾಗುವುದು. ಆ.17, 18 ಮತ್ತು 20 ರ ಪರೀಕ್ಷೆಗಳನ್ನು ಮೊದಲೇ ತಿಳಿಸಲಾದ ವೇಳಾಪಟ್ಟಿಯಂತೆ ನಡೆಸಲಾಗುತ್ತದೆ.

ಎನ್‌ಟಿಎ ವಿಶೇಷ ಕುಂದುಕೊರತೆ ನಿವಾರಣಾ ಇ-ಮೇಲ್ ವ್ಯವಸ್ಥೆಗೊಳಿಸಿದೆ. ವಿಷಯ ಸಂಯೋಜನೆ, ಮಾಧ್ಯಮ, ಪ್ರಶ್ನೆ ಪತ್ರಿಕೆ (ಯಾವುದಾದರೂ ಇದ್ದರೆ) ಕುರಿತು ದೂರುಗಳನ್ನು cuetgrievance@nta.ac.in ಗೆ ಕಳುಹಿಸಬಹುದು. ದೂರು ಸಲ್ಲಿಸುವಾಗ ಅಭ್ಯರ್ಥಿಗಳು ಅರ್ಜಿ ಸಂಖ್ಯೆ ನಮೂದಿಸಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.