ADVERTISEMENT

ಕಾಂಗ್ರೆಸ್‌ಗೆ ಚುನಾಯಿತ ಅಧ್ಯಕ್ಷರಿಲ್ಲದಿದ್ದರೆ ಆಕಾಶವೇನೂ ಕಳಚಿ ಬೀಳದು: ಖುರ್ಷೀದ್

ಕಾಂಗ್ರೆಸ್‌ನ ಹಿರಿಯ ಮುಖಂಡ ಸಲ್ಮಾನ್‌ ಖುರ್ಷೀದ್‌ ಹೇಳಿಕೆ

ಪಿಟಿಐ
Published 30 ಆಗಸ್ಟ್ 2020, 11:52 IST
Last Updated 30 ಆಗಸ್ಟ್ 2020, 11:52 IST
 ಕಾಂಗ್ರೆಸ್‌ನ ಹಿರಿಯ ಮುಖಂಡ ಸಲ್ಮಾನ್‌ ಖುರ್ಷೀದ್‌
ಕಾಂಗ್ರೆಸ್‌ನ ಹಿರಿಯ ಮುಖಂಡ ಸಲ್ಮಾನ್‌ ಖುರ್ಷೀದ್‌    

ನವದೆಹಲಿ:‘ಪಕ್ಷದ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಬೇಕು ಎಂಬ ಅವಸರವೇನಿಲ್ಲ. ಚುನಾಯಿತ ಅಧ್ಯಕ್ಷರು ಇಲ್ಲದಿದ್ದರೆ ಆಕಾಶವೇನೂ ಕಳಚಿಬೀಳುವುದಿಲ್ಲ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಸಲ್ಮಾನ್‌ ಖುರ್ಷೀದ್‌ ಭಾನುವಾರ ಹೇಳಿದ್ದಾರೆ.

‘ಅಧ್ಯಕ್ಷರಾಗಿಕಾರ್ಯ ನಿರ್ವಹಿಸುತ್ತಿರುವ ಸೋನಿಯಾ ಗಾಂಧಿ ಪಕ್ಷವನ್ನು ಈಗ ಮುನ್ನಡೆಸುತ್ತಿದ್ದಾರೆ. ನಾಯಕತ್ವ ವಿಷಯದ ಬಗ್ಗೆ ಸಹ ಅವರೇ ತೀರ್ಮಾನಿಸಲಿದ್ದಾರೆ’ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

‘ಪಕ್ಷದ ನಾಯಕತ್ವದಲ್ಲಿ ಆಮೂಲಾಗ್ರ ಬದಲಾವಣೆ ಬಯಸಿ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದ ಮುಖಂಡರು ಒಂದು ವೇಳೆ ಈ ಮೊದಲೇ ನನ್ನನ್ನು ಭೇಟಿ ಮಾಡಿದ್ದರೂ, ನಾನು ಆ ಪತ್ರಕ್ಕೆ ಸಹಿ ಮಾಡುತ್ತಿರಲಿಲ್ಲ’ ಎಂದೂ ಹೇಳಿದ್ದಾರೆ.

ADVERTISEMENT

‘ಈ ಹಿಂದಿನ ವರ್ಷಗಳಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗಳು ನಡೆದಿರಲಿಲ್ಲ. ಆದರೂ ಪಕ್ಷ ಅಧಿಕಾರದಲ್ಲಿತ್ತು. ಅಧಿಕಾರ ಅನುಭವಿಸಿದವರ ಪೈಕಿ ಗುಲಾಂ ನಬಿ ಆಜಾದ್‌ ಅವರೂ ಒಬ್ಬರಾಗಿದ್ದರು’ ಎಂದು ಆಜಾದ್‌ ಅವರ ನಡೆ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದ ಮುಖಂಡರು ಸುಲಭವಾಗಿ ಅವರೊಂದಿಗೆ ಮಾತನಾಡುವ ಅವಕಾಶ ಹೊಂದಿದ್ದರು. ಈ ರೀತಿ ಪತ್ರ ಬರೆಯುವ ಬದಲು, ಖುದ್ದಾಗಿ ಭೇಟಿಯಾಗಿ ತಮ್ಮ ಅಹವಾಲು ಸಲ್ಲಿಸಬಹುದಿತ್ತು’ ಎಂದೂ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.