ADVERTISEMENT

ಸೋನಿಯಾ ಭೇಟಿ ಮಾಡಿದ ಅಮರಿಂದರ್

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 15:56 IST
Last Updated 10 ಆಗಸ್ಟ್ 2021, 15:56 IST
   

ನವದೆಹಲಿ: ಪಂಜಾಬ್‌ನ ಕಾಂಗ್ರೆಸ್‌ನಲ್ಲಿನ ಆಂತರಿಕ ಕಚ್ಚಾಟವು ತಾರಕಕ್ಕೇರಿದ್ದು, ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಮಂಗಳವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನವಜೋತ್ ಸಿಂಗ್ ಸಿಧು ಅವರನ್ನು ನೇಮಕ ಮಾಡಿದ ಬಳಿಕ ಅಮರಿಂದರ್ ಇದೇ ಮೊದಲ ಬಾರಿಗೆ ಸೋನಿಯಾ ಅವರನ್ನು ಭೇಟಿ ಮಾಡಿದ್ದಾರೆ.

ಅಧ್ಯಕ್ಷರಾಗಿ ನೇಮಕವಾದ ಬಳಿಕವೂ ಸಿಧು ಅವರು ಪಂಜಾಬ್ ಸರ್ಕಾರದ ವಿರುದ್ಧದ ಆರೋಪಗಳನ್ನು ಮುಂದುವರಿಸಿದ್ದು, ರಾಜ್ಯದಲ್ಲಿನ ಡ್ರಗ್ ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಈ ಬಗ್ಗೆ ವರದಿಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆ ವಿಧಾನಸಭೆಯಲ್ಲಿ ನಿರ್ಣಯ ತರುವ ಬಗ್ಗೆಯೂ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸಿಧು ಸರ್ಕಾರದ ಮೇಲೆ ನಿರಂತರ ವಾಗ್ದಾಳಿ ನಡೆಸುತ್ತಿರುವ ಅಮರಿಂದರ್ ಅವರಿಗೆ ಅತೃಪ್ತಿ ಇದೆ ಎಂದು ತಿಳಿದುಬಂದಿದೆ.

ಸೋನಿಯಾ ಅವರ ಜತೆಗಿನ ಸಭೆಯಲ್ಲಿ ರಾಜ್ಯ ಸಂಪುಟ ಪುನರ್ ರಚನೆ ಹಾಗೂ ಅದರಲ್ಲಿ ಸೇರಿಸಬೇಕಾದ ಸಂಭಾವ್ಯ ಅಭ್ಯರ್ಥಿಗಳ ಕುರಿತು ಹಾಗೂ ಮುಂಬರುವ ಚುನಾವಣೆಯ ಕುರಿತು ಅಮರಿಂದರ್ ಚರ್ಚಿಸಿದ್ದಾರೆ ಎನ್ನಲಾಗಿದೆ.

ಸೋನಿಯಾ ಅವರನ್ನು ಭೇಟಿಯಾಗಿ ಒಂದು ತಾಸು ಸಭೆ ನಡೆಸಿರುವ ಕುರಿತು ಅಮರಿಂದರ್ ಅವರ ಮಾಧ್ಯಮ ಸಲಹೆಗಾರ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.