ADVERTISEMENT

ಮತಯಂತ್ರ ವಿರುದ್ಧ ಹೋರಾಟ ಚುರುಕು, ವಿರೋಧ ಪಕ್ಷಗಳಿಂದ ಚುನಾವಣಾ ಆಯೋಗಕ್ಕೆ ಭೇಟಿ

ಪಿಟಿಐ
Published 21 ಮೇ 2019, 4:53 IST
Last Updated 21 ಮೇ 2019, 4:53 IST
   

ನವದೆಹಲಿ: ಮತಗಟ್ಟೆ ಸಮೀಕ್ಷೆಗಳ ಫಲಿತಾಂಶ ಹೊರಬೀಳುತ್ತಿದ್ದಂತೆ ವಿರೋಧಪಕ್ಷಗಳವರು ವಿವಿಪ್ಯಾಟ್‌– ಮತಯಂತ್ರ ತಾಳೆ ಕುರಿತ ಹೋರಾಟಕ್ಕೆ ಪುನಃ ಜೀವ ನೀಡಿದ್ದಾರೆ. ವಿವಿಧ ಪಕ್ಷಗಳ ಮುಖಂಡರು ಮಂಗಳವಾರ ಚುನಾವಣಾ ಆಯೋಗವನ್ನು ಭೇಟಿ ಮಾಡಲಿದ್ದು, ‘ಒಂದೇಒಂದು ಕಡೆ ಮತಯಂತ್ರ– ವಿವಿಪ್ಯಾಟ್‌ ಮತಗಳಲ್ಲಿ ವ್ಯತ್ಯಾಸ ಕಂಡುಬಂದರೂ ಎಲ್ಲ ವಿವಿಪ್ಯಾಟ್‌ಗಳನ್ನುತಾಳೆ ಮಾಡಬೇಕು’ ಎಂದು ಒತ್ತಾಯಿಸಲಿದ್ದಾರೆ.

ಚುನಾವಣಾ ಆಯೋಗವನ್ನು ಭೇಟಿ ಮಾಡಲಿರುವ ತಂಡದಲ್ಲಿ ಕಾಂಗ್ರೆಸ್‌, ಟಿಡಿಪಿ, ಟಿಎಂಸಿ, ಸಿಪಿಎಂ, ಸಿಪಿಐ ಮುಂತಾದ ಪಕ್ಷಗಳ ಪ್ರತಿನಿಧಿಗಳುಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ವಿವಿಪ್ಯಾಟ್– ಮತಯಂತ್ರ ತಾಳೆಯಾಗದಿದ್ದರೆ ಏನು ಮಾಡಬೇಕು ಎಂಬ ಬಗ್ಗೆ ಚುನಾವಣಾ ಆಯೋಗಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಒಂದೇ ಒಂದು ಕಡೆ ವ್ಯತ್ಯಾಸ ಕಂಡುಬಂದರೂ ಆ ವಿಧಾನಸಭಾ ಕ್ಷೇತ್ರದ ಎಲ್ಲಾ ಮತಗಟ್ಟೆಗಳ ವಿವಿಪ್ಯಾಟ್– ಮತಯಂತ್ರಗಳ ತಾಳೆ ಮಾಡಬೇಕು’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸೋಮವಾರ ಟ್ವೀಟ್‌ ಮೂಲಕ ಒತ್ತಾಯಿಸಿದ್ದಾರೆ.

ADVERTISEMENT

‘ಇವಿಎಂ– ವಿವಿಪ್ಯಾಟ್‌ ಮತಗಳು ತಾಳೆಯಾಗದಿದ್ದರೆ ಏನು ಮಾಡಬೇಕು ಎಂಬುದನ್ನು ಎಣಿಕೆ ಆರಂಭಿಸುವುದಕ್ಕೂ ಮೊದಲೇ ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದು ನಾವು ಚುನಾವಣಾ ಆಯೋಗವನ್ನು ಭೇಟಿ ಮಾಡಿ ಒತ್ತಾಯಿಸಲಿದ್ದೇವೆ’ ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿಡಿ. ರಾಜಾ ಹೇಳಿದ್ದಾರೆ.

‘ಕನಿಷ್ಠ ಶೇ 50ರಷ್ಟು ವಿವಿಪ್ಯಾಟ್‌ಗಳನ್ನು ಮತಯಂತ್ರದ ಜೊತೆಗೆ ತಾಳೆ ಮಾಡಬೇಕು ಎಂಬ ಒತ್ತಾಯವನ್ನು ಮತ್ತೆ ಮಾಡಲಿದ್ದೇವೆ. ಮತ ಎಣಿಕೆಯ ಆರಂಭದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದ ಐದು ಮತಗಟ್ಟೆಗಳ ವಿವಿಪ್ಯಾಟ್‌ಗಳ ಎಣಿಕೆ ನಡೆಸಬೇಕು. ಒಂದು ಕಡೆ ವ್ಯತ್ಯಾಸ ಕಂಡುಬಂದರೂ ಎಲ್ಲಾ ವಿವಿಪ್ಯಾಟ್‌ಗಳ ಮತಗಳನ್ನು ತಾಳೆ ಮಾಡಬೇಕು’ ಎಂದು ಟಿಡಿಪಿ ಮುಖ್ಯಸ್ಥ ಎನ್‌.ಚಂದ್ರಬಾಬು ನಾಯ್ಡು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.