ADVERTISEMENT

ಸದಾನಂದಗೌಡರ ಸಚಿವ ಸ್ಥಾನ ಕಸಿದ ‘ಮಾನಹಾನಿ’ ಪ್ರಕರಣ?

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 17:23 IST
Last Updated 7 ಜುಲೈ 2021, 17:23 IST
ಡಿ.ವಿ. ಸದಾನಂದಗೌಡ
ಡಿ.ವಿ. ಸದಾನಂದಗೌಡ   

ಬೆಂಗಳೂರು: ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆಯಂತಹ ಮಹತ್ವದ ಖಾತೆ ಹೊಂದಿದ್ದ ಡಿ.ವಿ. ಸದಾನಂದಗೌಡರು ಸಚಿವ ಸ್ಥಾನ ಕಳೆದುಕೊಳ್ಳಲು ತಮ್ಮ ವಿರುದ್ಧ ಮಾನಿಹಾನಿಕರ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳ ವಿರುದ್ಧ ಅವರು ತಂದಿದ್ದ ತಡೆಯಾಜ್ಞೆ ಕಾರಣವಾಯಿತೇ ಎಂಬ ಚರ್ಚೆ ಬಿಜೆಪಿಯಲ್ಲಿ ಶುರುವಾಗಿದೆ.

ಆಕಸ್ಮಿಕ ರಾಜಕೀಯ ಸನ್ನಿವೇಶವೊಂದರಲ್ಲಿ ಕರ್ನಾಟಕ ಮುಖ್ಯಮಂತ್ರಿ ಹುದ್ದೆಗೇರಿದ ಸದಾನಂದಗೌಡರು ತಮ್ಮ ವರ್ಚಸ್ಸನ್ನು ಆಗ ಉಳಿಸಿಕೊಂಡಿದ್ದರು. ತಮ್ಮನ್ನು ಮುಖ್ಯಮಂತ್ರಿ ಮಾಡಿದ್ದ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿರುದ್ಧವಾಗಿ ಅವರು ನಡೆಯತೊಡಗಿದ್ದರಿಂದಾಗಿ ಅಕಾಲಿಕವಾಗಿ ಅಧಿಕಾರ ತ್ಯಜಿಸುವ ಅನಿವಾರ್ಯಕ್ಕೆ ಅವರನ್ನು ದೂಡಲಾಗಿತ್ತು.

2014ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ ಅವರಿಗೆ, ಕರ್ನಾಟಕದಲ್ಲಾದ ‘ಅನ್ಯಾಯ’ಕ್ಕೆ ಪರಿಹಾರವೆಂಬಂತೆ ಆಯಕಟ್ಟಿನ ಸಚಿವ ಸ್ಥಾನಗಳೇ ಸಿಕ್ಕಿದ್ದವು. ಅಲ್ಲಿಯೂ ನಿರೀಕ್ಷಿತ ದಕ್ಷತೆ, ಶ್ರಮ, ಚುರುಕುತನ ತೋರದೇ ಕಳಪೆ ನಿರ್ವಹಣೆಯಿಂದಾಗಿ ಕರ್ನಾಟಕ ಪ್ರತಿನಿಧಿಸುವವರಿಗೆ ಸಿಕ್ಕಿದ್ದ ರೈಲ್ವೆ ಖಾತೆಯು ಅಲ್ಪಕಾಲದಲ್ಲೇ ಅವರಿಂದ ಕೈತಪ್ಪಿ ಹೋಗಿತ್ತು. ಅದಾದ ಬಳಿಕ ಕಾನೂನು ಸಚಿವರಾಗಿಯೂ ಕೆಲಸ ಮಾಡಿದ್ದರು. ಬಳಿಕ ಅದೂ ಅವರ ಕೈತಪ್ಪಿತು. ಅಂತಿಮವಾಗಿ ಅವರನ್ನು ಕಾರ್ಯಕ್ರಮಗಳ ಅನುಷ್ಠಾನ ಮತ್ತು ಅಂಕಿಅಂಶ ಖಾತೆ ಸಚಿವರನ್ನಾಗಿ ಮಾಡಲಾಯಿತು.

ADVERTISEMENT

ಎಚ್‌.ಎನ್. ಅನಂತಕುಮಾರ್ ಅಕಾಲಿಕ ನಿಧನದ ತರುವಾಯ, ಅವರು ನಿರ್ವಹಿಸುತ್ತಿದ್ದ ರಸಗೊಬ್ಬರ ಖಾತೆ ಗೌಡರ ಹೆಗಲೇರಿತು. ಎನ್‌ಡಿಎ ಎರಡನೇ ಅವಧಿಯಲ್ಲಿ ಅದೇ ಖಾತೆಯೇ ಮುಂದುವರಿಯಿತು. ಅವರ ಕಾರ್ಯ ನಿರ್ವಹಣೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತೃಪ್ತಿ ಇರಲಿಲ್ಲ ಎನ್ನಲಾಗಿತ್ತು.

ಇದರ ಜತೆಗೆ, ಇತ್ತೀಚೆಗೆ ಸದ್ದು ಮಾಡತೊಡಗಿದ್ದ ವಿಡಿಯೊ ಪ್ರಕರಣ ಅವರನ್ನು ಸಂಪುಟದಿಂದ ಕೈ ಬಿಡಬೇಕಾದ ಸಂದಿಗ್ದತೆಗೆ ಕಾರಣವಾಗಿತ್ತು ಎಂದೂ ಹೇಳಲಾಗುತ್ತಿದೆ. ಈ ವಿಡಿಯೊ ಬಹಿರಂಗಗೊಂಡರೆ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ ಎಂಬ ಕಾರಣಕ್ಕೆ, ತಮ್ಮ ವಿರುದ್ಧ ಯಾವುದೇ ರೀತಿಯ ಮಾನಿಹಾನಿಕಾರಕ ಸುದ್ದಿ ಪ್ರಕಟಿಸಬಾರದು ಎಂದು ಸದಾನಂದಗೌಡರು ಕಳೆದ ವಾರವಷ್ಟೇ ತಡೆಯಾಜ್ಞೆ ತಂದಿದ್ದರು. ಈ ಪ್ರಕರಣ, ಸಚಿವ ಸ್ಥಾನ ಕೈತಪ್ಪಲು ತತ್‌ಕ್ಷಣದ ಕಾರಣ ಎಂದು ಬಿಜೆಪಿ ನಾಯಕರ ಮಧ್ಯೆ ಚರ್ಚೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.