ADVERTISEMENT

ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ: ಯುಜಿಸಿ ನಿಯಮದ ವಿರುದ್ಧ ಸುಪ್ರೀಂಗೆ ಮೊರೆ

ಕಾಲೇಜು, ವಿವಿ ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ ತಡೆಯಲು ಸಮಿತಿ

ಪಿಟಿಐ
Published 27 ಜನವರಿ 2026, 16:09 IST
Last Updated 27 ಜನವರಿ 2026, 16:09 IST
<div class="paragraphs"><p> Students stage a protest against the new University Grants Commission (UGC) </p></div>

Students stage a protest against the new University Grants Commission (UGC)

   

ನವದೆಹಲಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಹೋಗಲಾಡಿಸಲು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಜಾರಿಗೆ ತಂದಿರುವ ಹೊಸ ನಿಯಮದಲ್ಲಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಉತ್ತೇಜಿಸುವ ನಿಯಮ –2026) ‘ಜಾತಿ ತಾರತಮ್ಯದ ವ್ಯಾಖ್ಯಾನ’ವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.  

ಯುಜಿಸಿ ಹೊಸ ನಿಯಮ 3 (ಸಿ) ಅನ್ವಯ, ಜಾತಿ ಆಧಾರಿತ ತಾರತಮ್ಯ ತಡೆಯಲು ಕಾಲೇಜು ಕ್ಯಾಂಪಸ್‌ಗಳಲ್ಲಿ, ವಿಶ್ವವಿದ್ಯಾಲಯದಲ್ಲಿ ಸಮಾನ ಅವಕಾಶ ಕೇಂದ್ರಗಳು (ಇಒಸಿ), ಸಮಾನತೆ ಸಮಿತಿ, ಓಂಬುಡ್ಸ್‌ಮನ್, ಸಹಾಯವಾಣಿ ಸ್ಥಾಪಿಸುವುದರ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ, ಈ ಸೌಲಭ್ಯದ ವ್ಯಾಪ್ತಿಯನ್ನು ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮಾತ್ರ ಸೀಮಿತಗೊಳಿಸಲಾಗಿದೆ. ಈ ನಿಯಮವು ಮೀಸಲಾತಿ ವರ್ಗದಡಿ ಸೇರದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಅರ್ಜಿದಾರ ವಿನೀತ್‌ ಜಿಂದಾಲ್ ದೂರಿದ್ದಾರೆ.  

ADVERTISEMENT

‘ಹೊಸ ನಿಯಮದ ಮೂಲಕ ಯುಜಿಸಿಯು, ಸಾಮಾನ್ಯ ವರ್ಗದಡಿ ಬರುವ ವ್ಯಕ್ತಿಗಳಿಗೆ ಸಾಂಸ್ಥಿಕ ರಕ್ಷಣೆಯನ್ನು ಮತ್ತು ಅವರ ಕುಂದುಕೊರತೆಗಳಿಗೆ ಪರಿಹಾರವನ್ನು ಸ್ಪಷ್ಟವಾಗಿ ನಿರಾಕರಿಸಿದೆ’ ಎಂದು ಅವರು ಆರೋಪಿಸಿದ್ದಾರೆ.

‘ಮೀಸಲಾತಿ ವರ್ಗದಡಿ ಸೇರದವರು ತಮ್ಮ ಜಾತಿ ಹೆಸರಿನಲ್ಲಿ ಕಿರುಕುಳ ಅಥವಾ ತಾರತಮ್ಯ ಎದುರಿಸುವ ಸಾಧ್ಯತೆ ಇರುತ್ತದೆ. ಈ ನಿಯಮ ಅಸಾಂವಿಧಾನಿಕ ಮತ್ತು ಸಂವಿಧಾನದ 14ನೇ ವಿಧಿ (ಸಮಾನತೆಯ ಹಕ್ಕು), 15 (1) ವಿಧಿ (ಜಾತಿ ಆಧಾರಿತ ತಾರತಮ್ಯ ನಿಷೇಧ) ಮತ್ತು 21ನೇ ವಿಧಿಯನ್ನು (ಜೀವಿಸುವ ಹಕ್ಕು)  ಉಲ್ಲಂಘಿಸುತ್ತದೆ ಎಂದೂ ಕೋರ್ಟ್‌ ಗಮನಕ್ಕೆ ತರಲಾಗಿದೆ. 

ಯುಜಿಸಿ ರೂಪಿಸಿರುವ ನಿಯಮಗಳಿಗೆ ತಡೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆ 

ಯುಜಿಸಿ ಜಾರಿಗೊಳಿಸಿರುವ ಹೊಸ ನಿಯಮವನ್ನು ಸಂಪೂರ್ಣವಾಗಿ ವಾಪಸ್‌ ಪಡೆಯುವಂತೆ ಆಗ್ರಹಿಸಿ ವಿದ್ಯಾರ್ಥಿ ಸಂಘಟನೆಗಳು ನವದೆಹಲಿಯಲ್ಲಿನ ಯುಜಿಸಿ ಪ್ರಧಾನ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು. 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

‘ದುರುಪಯೋಗಕ್ಕೆ ಅವಕಾಶವಿಲ್ಲ’

ಯುಜಿಸಿ ನಿಯಮಗಳು ಸಂವಿಧಾನದ ವ್ಯಾಪ್ತಿಯಲ್ಲೇ ಇವೆ. ಸುಪ್ರೀಂಕೋರ್ಟ್‌ ಮೇಲ್ವಿಚಾರಣೆಯಲ್ಲೇ ಇವುಗಳನ್ನು ಸಿದ್ಧಪಡಿಸಲಾಗಿದೆ. ಜಾತಿ ತಾರತಮ್ಯದ ಹೆಸರಿನಲ್ಲಿ ಕಿರುಕುಳ ನೀಡಲು ನಿಯಮಗಳನ್ನು ದುರುಪಯೋಗಪಡಿಸಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ – ಧರ್ಮೇಂದ್ರ ಪ್ರಧಾನ್‌ ಕೇಂದ್ರ ಶಿಕ್ಷಣ ಸಚಿವ 

ಸಿಟಿ ಮ್ಯಾಜಿಸ್ಟ್ರೇಟ್‌ ರಾಜೀನಾಮೆ

ಬರೇಲಿ /ಉತ್ತರ ಪ್ರದೇಶ (ಪಿಟಿಐ): ‘ಈಗಾಗಲೇ ರಾಜೀನಾಮೆ ಸಲ್ಲಿಸಿದ್ದೇನೆ ಅಮಾನತಿನ ಬಗ್ಗೆ ಹೇಳುವುದಕ್ಕೆ ಏನೂ ಇಲ್ಲ’ ಎಂದು ಬರೇಲಿ ಸಿಟಿ ಮ್ಯಾಜಿಸ್ಟ್ರೇಟ್‌ ಅಲಂಕಾರ್‌ ಅಗ್ನಿಹೋತ್ರಿ ಹೇಳಿದ್ದಾರೆ.  ಅಶಿಸ್ತಿನ ವರ್ತನೆ ಮತ್ತು ಸರ್ಕಾರದ ನೀತಿಗಳನ್ನು ವಿಶೇಷವಾಗಿ ಹೊಸ ಯುಜಿಸಿ ನಿಯಮವನ್ನು ಟೀಕಿಸಿದ್ದರಿಂದ  ಅಗ್ನಿಹೋತ್ರಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಮಂಗಳವಾರ ಹೇಳಿದೆ. ಅಮಾನತಿಗೆ ಮೊದಲೇ ರಾಜೀನಾಮೆ ನೀಡಿದ್ದಾಗಿ ಅಗ್ನಿಹೋತ್ರಿ ಹೇಳಿದ್ದಾರೆ.   ‘ಸರ್ಕಾರದ ನೀತಿಗಳ ಬಗ್ಗೆ ತೀವ್ರ ಭಿನ್ನಾಭಿಪ್ರಾಯ ಇದೆ. ಮುಖ್ಯವಾಗಿ ಯುಜಿಸಿ ಹೊಸ ನಿಯಮದ ಮೂಲಕ ಕ್ಯಾಂಪಸ್‌ಗಳಲ್ಲಿ ಜಾತಿ ಆಧಾರಿತ ತಾರತಮ್ಯ ಎಸಗಲು ಮುಂದಾಗಿದೆ. ತಮ್ಮ ವಿರುದ್ಧ ಪಿತೂರಿ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.