ADVERTISEMENT

‘ಬೆಕ್ಕು, ನಾಯಿಗಳು ಪ್ರೀತಿಯನ್ನು ಮಾತ್ರ ಹಂಚಬಲ್ಲವು; ಕೊರೊನಾವನ್ನಲ್ಲ’

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 15:58 IST
Last Updated 8 ಏಪ್ರಿಲ್ 2020, 15:58 IST
   

ನವದೆಹಲಿ: ‘ಪ್ರಾಣಿಗಳಿಂದ ಕೊರೊನಾ ಸೋಂಕು ಹರಡುತ್ತದೆ ಎನ್ನುವ ವದಂತಿಗಳಿಗೆ ಕಿವಿಗೊಡದೆ ಜನರು ಬೆಕ್ಕು, ನಾಯಿಗಳ ಕಾಳಜಿ ಮಾಡಬೇಕು’ ಎಂದು ಬಿಜೆಪಿ ನಾಯಕಿ ಮೇನಕಾ ಗಾಂಧಿ ಸೇರಿದಂತೆ ಹಲವು ಗಣ್ಯರು ಮನವಿ ಮಾಡಿದ್ದಾರೆ.

‘ಮೃಗಾಲಯವೊಂದರಲ್ಲಿ ಹುಲಿಗೆ ಕೊರೊನಾ ಸೋಂಕು ತಗುಲಿದೆ ಎನ್ನುವ ಅಸಂಬದ್ಧ ಸುದ್ದಿಯನ್ನು ನೀವು ಮಾಧ್ಯಮದಲ್ಲಿ ವೀಕ್ಷಿಸಿದ್ದರೆ, ಬೆಕ್ಕು ಹಾಗೂ ಹುಲಿ ಒಂದೇ ಅಲ್ಲ ಎನ್ನುವುದನ್ನು ನೆನಪಿಡಿ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಇದು ನಾಯಿಯನ್ನು ತೋಳಕ್ಕೆ ಹೋಲಿಸಿದಂತಾಗುತ್ತದೆ. ಬೆಕ್ಕು ಕೊರೊನಾ ಸೋಂಕು ಹರಡಲು ಸಾಧ್ಯವಿಲ್ಲ’ ಎಂದು ವನ್ಯಜೀವಿ ಹಕ್ಕುಗಳ ಕಾರ್ಯಕರ್ತೆಯೂ ಆಗಿರುವ ಮೇನಕಾ ಗಾಂಧಿ ಟ್ವಿಟರ್ ವಿಡಿಯೊ ಸಂದೇಶದ ಮೂಲಕ ತಿಳಿಸಿದ್ದಾರೆ.

ಬೆಕ್ಕು ಹಾಗೂ ನಾಯಿಗಳು ಕೊರೊನಾ ಸೋಂಕು ಹರಡಬಲ್ಲವು ಎನ್ನುವ ತಪ್ಪು ಮಾಹಿತಿಯಿಂದಾಗಿ, ಅವುಗಳ ಮೇಲೆ ದಾಳಿ ನಡೆದ ಹಲವು ಪ್ರಕರಣಗಳು ವರದಿಯಾಗಿವೆ. ಈ ನಿಟ್ಟಿನಲ್ಲಿ ಮೇನಕಾ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ADVERTISEMENT

‘ಸಾಕು‍ಪ್ರಾಣಿಗಳು ಪ್ರೀತಿಯನ್ನು ಮಾತ್ರ ಹಂಚಬಲ್ಲವು. ಆದ್ದರಿಂದ ದಯವಿಟ್ಟು ನೀವು ನಿಮ್ಮ ಸಾಕುಪ್ರಾಣಿಗಳು ಹಾಗೂ ಬೀದಿಯಲ್ಲಿರುವ ಬೆಕ್ಕು, ನಾಯಿಗಳನ್ನೂ ಕಾಪಾಡಿಕೊಳ್ಳಿ’ ಎಂದು ಕುಸ್ತಿಪಟು ಸಂಗ್ರಾಮ್ ಸಿಂಗ್ ವಿಡಿಯೊ ಸಂದೇಶ ನೀಡಿದ್ದಾರೆ.

‘ಇಂತಹ ಸಂದರ್ಭದಲ್ಲಿ ನಿಮ್ಮನ್ನು ಸಮಾಧಾನಗೊಳಿಸುವುದು ಪ್ರಾಣಿಗಳು ತೋರಿಸುವ ಪ್ರೀತಿ’ ಎಂದು ಬಾತ್ರಾ ಪಾಸಿಟಿವ್ ಹೆಲ್ತ್ ಕ್ಲಿನಿಕ್ ಪ್ರೈ.ಲಿ. ಸಂಸ್ಥಾಪಕ ಮುಖೇಶ್ ಬಾತ್ರಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.