ADVERTISEMENT

ಕಾವೇರಿ: ತಮಿಳುನಾಡಿನ ಮತ್ತೊಂದು ಅರ್ಜಿ

ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಅರ್ಜಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 20:30 IST
Last Updated 9 ಡಿಸೆಂಬರ್ 2018, 20:30 IST

ನವದೆಹಲಿ: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ತಟಸ್ಥ ನಿಲುವಿನ ವ್ಯಕ್ತಿಯೊಬ್ಬರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಶನಿವಾರ ಅರ್ಜಿ ಸಲ್ಲಿಸಿದೆ.

ಪ್ರಾಧಿಕಾರಕ್ಕೆ ಪೂರ್ಣಾವಧಿ ಸದಸ್ಯರನ್ನು ನೇಮಕ ಮಾಡುವಂತೆಯೂ ಕೋರಿದೆ. ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಸಮಗ್ರ ಯೋಜನೆ ರೂಪಿಸಲು ಕರ್ನಾಟಕ ಸರ್ಕಾರಕ್ಕೆ ಒಪ್ಪಿಗೆ ದೊರೆತ ನಂತರ ತಮಿಳುನಾಡು ಸರ್ಕಾರ ಸಲ್ಲಿಸುತ್ತಿರುವ ಮೂರನೇ ಅರ್ಜಿ ಇದಾಗಿದೆ.

ಕರ್ನಾಟಕದ ಮೇಕೆದಾಟು ಯೋಜನೆಯನ್ನು ಸ್ಥಗಿತಗೊಳಿಸುವಂತೆ ಕೋರಿ ತಮಿಳುನಾಡು ಈ ಮೊದಲು ಸಲ್ಲಿಸಿದ್ದ ಅರ್ಜಿಯನ್ನು ಇದೇ ವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ.

ADVERTISEMENT

ಮೇಕೆದಾಟು ಯೋಜನೆ ಕೈಗೆತ್ತಿಕೊಂಡಿರುವ ಕರ್ನಾಟಕ ಮತ್ತು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಮಾಡಿ ಮತ್ತೊಂದು ಅರ್ಜಿಯನ್ನೂ ಸುಪ್ರೀಂ ಕೋರ್ಟ್‌ಗೆತಮಿಳುನಾಡು ಸಲ್ಲಿಸಿದೆ.

ತಮಿಳುನಾಡು ವಾದವೇನು?: ಅಂತರರಾಜ್ಯ ನದಿ ನೀರು ಹಂಚಿಕೆ ವ್ಯಾಜ್ಯ ಇತ್ಯರ್ಥ ಕಾಯ್ದೆ 1956ರ ಸೆಕ್ಷನ್‌ 6ಎ ಅಡಿ ರೂಪಿಸಲಾದ ಕಾವೇರಿ ನದಿ ನೀರು ನಿರ್ವಹಣಾ ಯೋಜನೆ 2018ರ 3(2)(ಎ) ನಿಬಂಧನೆ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳಿಗೆ ಅನುಗುಣವಾಗಿ ಈ ನೇಮಕ ಮಾಡುವಂತೆ ತಮಿಳುನಾಡು ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.