ಕೇರಳ ಸಂಸ್ಕೃತಿ ಸಚಿವ ಸಾಜಿ ಚೆರಿಯಾನ್ ಹಾಗೂ 'ಜಾನಕಿ vs ಸ್ಟೇಟ್ ಆಫ್ ಕೇರಳ' ಸಿನಿಮಾ ಪೋಸ್ಟರ್
ಚಿತ್ರಕೃಪೆ: X/@SajiCherian11
ಕೊಚ್ಚಿ: ಮಕ್ಕಳಿಗೆ ನಮ್ಮಿಷ್ಟದ ಹೆಸರುಗಳನ್ನು ಇಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎನ್ನುವ ಮೂಲಕ ಕೇರಳ ಸಂಸ್ಕೃತಿ ಸಚಿವ ಸಾಜಿ ಚೆರಿಯಾನ್ ಅವರು ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರ ಸೃಜನಶೀಲ ಸ್ವಾತಂತ್ರ್ಯವನ್ನು ಪ್ರಶ್ನಿಸಲಾದ ಹಲವು ನಿದರ್ಶನಗಳು ಎದುರಾಗಿವೆ ಎಂದಿರುವ ಅವರು, ಬಿಡುಗಡೆಗೆ ಸಜ್ಜಾಗಿರುವ ಮಲಯಾಳಂ ಸಿನಿಮಾ 'ಜಾನಕಿ vs ಸ್ಟೇಟ್ ಆಫ್ ಕೇರಳ'ಕ್ಕೆ (ಜೆಎಸ್‌ಕೆ) ಅದರ ಹೆಸರಿನ ಕಾರಣಕ್ಕಾಗಿಯೇ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು (ಸಿಬಿಎಫ್‌ಸಿ) ಪ್ರಮಾಣಪತ್ರ ನಿರಾಕರಿಸಿರುವುದು ಅದಕ್ಕೊಂದು ತಾಜಾ ಉದಾಹರಣೆ ಎಂದು ದೂರಿದ್ದಾರೆ.
ಬಿಜೆಪಿಯರೇ ಆದ ಕೇಂದ್ರ ಸಚಿವ ಸುರೇಶ್ ಗೋಪಿ ಅವರೂ 'ಜೆಎಸ್‌ಕೆ' ಸಿನಿಮಾದಲ್ಲಿ ನಟಿಸಿದ್ದಾರೆ. ಆದರೂ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನಿರಾಕರಿಸಲಾಗಿದೆ ಎಂದಿರುವ ಚೆರಿಯಾನ್, 'ಜಾನಕಿ ಹೆಸರಲ್ಲೇನು ತಪ್ಪಿದೆ?' ಎಂದು ಪ್ರಶ್ನಿಸಿದ್ದಾರೆ. ಕೇಸರಿ ಪಕ್ಷವು ಅಧಿಕಾರಕ್ಕೇರಿದ ನಂತರ 'ಜನರು ಏನನ್ನು ಬರೆಯಬೇಕು, ಮಾತನಾಡಬೇಕು ಅಥವಾ ತಿನ್ನಬೇಕು ಎಂಬುದನ್ನು ಆದೇಶಿಸುತ್ತಿದೆ. ಹಾಗೆಯೇ, ಹೇಗೆ ಬದುಕಬೇಕು ಅಥವಾ ಕೋಮುವಾದದ ಹೆಸರಲ್ಲಿ ಜನರನ್ನು ವಿಭಜಿಸುವುದು ಹೇಗೆ ಎಂಬುದನ್ನು ಆಜ್ಞಾಪಿಸುತ್ತಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.
'ನಮ್ಮ ಸೃಜನಶೀಲ ಸ್ವಾತಂತ್ರ್ಯವನ್ನು ಪ್ರಶ್ನಿಸಲು ಬಿಡುವುದಿಲ್ಲ. ಯಾವುದೇ ಕೋಮು ಶಕ್ತಿಗಳಿಗೆ ಶರಣಾಗುವ ಅವಶ್ಯಕತೆ ಇಲ್ಲ ಎಂಬ ಸ್ಪಷ್ಟ ನಿಲುವು ರಾಜ್ಯ ಸರ್ಕಾರ ಹಾಗೂ ಎಲ್‌ಡಿಎಫ್‌ಗೆ ಇದೆ' ಎಂದು ಹೇಳಿದ್ದಾರೆ.
ಇಂತಹ ನಿದರ್ಶನಗಳು ಪರಿಸ್ಥಿತಿ ಹದಗೆಡುತ್ತಿರುವುದರ ಸೂಚನೆಯಾಗಿವೆ. ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಗಳನ್ನು ಪ್ರಶ್ನಿಸದಿದ್ದರೆ ದೇಶಕ್ಕೆ ಮತ್ತೆ ತುರ್ತುಪರಿಸ್ಥಿತಿಯ ಅನುಭವವೇ ಎದುರಾಗಲಿದೆ. ಅದನ್ನು ನಿಲ್ಲಿಸಬೇಕಿದೆ ಎಂದು ಒತ್ತಿ ಹೇಳಿದ್ದಾರೆ.
ಶ್ರೀರಾಮನ ಮಡದಿ ಸೀತಾದೇವಿಯ ಮತ್ತೊಂದು ಹೆಸರು ಜಾನಕಿ ಎಂಬುದಾಗಿರುವುದರಿಂದ 'ಜೆಎಸ್‌ಕೆ' ಸಿನಿಮಾದ ಹೆಸರು ಬದಲಾವಣೆ ಮಾಡುವಂತೆ ಸಿಬಿಎಫ್‌ಸಿ ಸೂಚಿಸಿದೆ. ಇದನ್ನು ಉಲ್ಲೇಖಿಸಿ, 'ಜನರು ತಮ್ಮದೇ ಮಕ್ಕಳಿಗೆ ಹೆಸರು ಇಡಲಾಗದಂತಹ ಪರಿಸ್ಥಿತಿ ಉದ್ಭವಿಸಲಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಬಿಎಫ್‌ಸಿ ನಿರ್ಧಾರ ಪ್ರಶ್ನಿಸಿ ನಿರ್ಮಾಣ ಸಂಸ್ಥೆ Cosmos Entertainments ಕೇರಳ ಹೈಕೋರ್ಟ್ ಮೆಟ್ಟಿಲೇರಿದೆ.
ವಿಚಾರಣೆ ನಡೆಸಿರುವ ಕೋರ್ಟ್, 'ಜಾನಕಿ ಹೆಸರಿಟ್ಟಿರುವದರಲ್ಲೇನು ತಪ್ಪಿದೆ?' ಎಂದು ಸೆನ್ಸಾರ್ ಮಂಡಳಿಯನ್ನು ಶುಕ್ರವಾರ ಪ್ರಶ್ನಿಸಿದೆ. ಹಾಗೆಯೇ, ಸಿನಿಮಾ ಪರಿಶೀಲನಾ ಸಮಿತಿಯ ನಿರ್ಧಾರದ ಕುರಿತು ಲಿಖಿತ ಉತ್ತರ ನೀಡುವಂತೆ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.